ಹಿಮ್ಸ್ನ ಕ್ಯಾನ್ಸರ್ ಯೂನಿಟ್ ಮೈಸೂರು ಆಸ್ಪತ್ರೆಗೆ ಸ್ಥಳಾಂತರ ವಿರೋಧ

ಹಿಮ್ಸ್ನ ಕ್ಯಾನ್ಸರ್ ಯೂನಿಟ್ ಮೈಸೂರು ಆಸ್ಪತ್ರೆಗೆ ಸ್ಥಳಾಂತರ ವಿರೋಧ
Published on

ಹಾಸನ: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿರುವ ಕ್ಯಾನ್ಸರ್ ಯೂನಿಟ್ ಅನ್ನು ಮೈಸೂರು ಆಸ್ಪತ್ರೆಗೆ ಸ್ಥಳಾಂತರಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಸಿದ್ಧತೆ ನಡೆದಿದ್ದು, ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹಿರಿಯ ನಾಗರಿಕರ ವೇದಿಕೆಯ ಮುಖಂಡ ಡಾ.ವೈ.ಎಸ್.ವೀರಭದ್ರಪ್ಪ ಹೇಳಿದರು.
ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ವೇದಿಕೆಯ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿತ್ಯ 60 ರಿಂದ 70 ಕ್ಯಾನ್ಸರ್ ರೋಗಿಗಳು ಬರುತ್ತಾರೆ. ಏಕಾಏಕಿ ಮೈಸೂರಿಗೆ ವೈದ್ಯಕೀಯ ಉಪಕರಣಗಳ ಸ್ಥಳಾಂತರ ಮಾಡಿದರೆ ರೋಗಿಗಳ ಪರಿಸ್ಥಿತಿ ವಿಷಮವಾಗುತ್ತದೆ. ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಎಂಬ ತರ್ಕವೇ ಅವೈಜ್ಞಾನಿಕವಾಗಿದೆ. ಕ್ಯಾನ್ಸರ್ ಯೂನಿಟ್ ಉನ್ನತೀಕರಿಸುವ ಉದ್ದೇಶದಿಂದ ಐದು ವರ್ಷಗಳ ಹಿಂದೆ 18 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ರೂಪುಗೊಂಡಿತ್ತು. ಆದರೆ ಸರ್ಕಾರ ಅನುದಾನ ನೀಡದ ಹಿನ್ನಲೆಯಲ್ಲಿ ಯೋಜನೆ ಕಾರ್ಯಗತವಾಗಲಿಲ್ಲ. ಈಗ ಇರುವ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸಂಪೂರ್ಣ ಯೂನಿಟ್ ಅನ್ನು ಬೇರೆ ಕಡೆಗೆ ಕಳುಹಿಸಿಕೊಡುವುದು ಸರಿಯಲ್ಲ. ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಿರಿಯ ನಾಗರಿಕರ ವೇದಿಕೆಯ ಬಿ.ಕೆ.ಮಂಜುನಾಥ್ ಅವರು ಮಾತನಾಡಿ, ಅತ್ಯುನ್ನತ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಹಾಸನಕ್ಕೆ ಉತ್ತಮ ಸ್ಥಾನವಿದೆ. ಅದನ್ನು ಉಳಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕಿದೆ. ಕ್ಯಾನ್ಸರ್ ಯೂನಿಟ್ ಹಾಸನದಲ್ಲೇ ಉಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಸಹಕರಿಸಬೇಕು. ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರಿಗೂ ಈ ಕುರಿತು ಮನವಿ ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ಹಿರಿಯ ನಾಗರಿಕರ ವೇದಿಕೆಯ ಆರ್.ಪಿ.ವೆಂಕಟೇಶ್‌ಮೂರ್ತಿ, ಚಂದ್ರೇಗೌಡ, ಈರೇಗೌಡ, ಮಹಾಲಕ್ಷ್ಮೀ, ದೊಡ್ಡಯ್ಯ, ಜಯಲಕ್ಷ್ಮೀ, ರಾಜಣ್ಣಗೌಡ, ಕಾಮಾಕ್ಷಿ, ವೆಂಕಟರಾಮು, ವನಜಾ ಸುರೇಶ್, ವೆಂಕಟೇಶ್ ಇತರರು ಇದ್ದರು.
’ ಇನ್ನು ಕ್ಯಾನ್ಸರ್ ಘಟಕ ಮೈಸೂರಿಗೆ ಸ್ಥಳಾಂತರವಾಗುತ್ತಿರುವ ವಿಚಾರವನ್ನು ಹಿಮ್ಸ್ ನಿರ್ದೇಶಕ ಡಾ.ಎಸ್.ವಿ.ಸಂತೋಷ್ ಅವರು ಅಲ್ಲಗಳೆದಿದ್ದಾರೆ. 5 ಕೋಟಿ ರೂ. ವೆಚ್ಚದಲ್ಲಿ ಬಾಬಾ ಅಟೋಮ್ಯಾಡಿಕ್ ರಿಸರ್ಚ್ ಸೆಂಟರ್‌ನಿಂದ ಕ್ಯಾನ್ಸರ್ ಚಿಕಿತ್ಸೆಗೆ ಯಂತ್ರೋಪಕರಣ ಅಳವಡಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ 2 ಕೋಟಿ ಹಾಗು ಹಿಮ್ಸ್ 3 ಕೋಟಿ ರೂ. ಭರಿಸಿದೆ. ನಿತ್ಯ 40 ರಿಂದ 100 ರೋಗಿಗಳು ಬರುತ್ತಾರೆ. ಆದ್ದರಿಂದ ಕ್ಯಾನ್ಸರ್ ಘಟಕ ಬೇರೆ ಕಡೆ ಸ್ಥಳಾಂತರಿಸುವುದಿಲ್ಲ. ಮಾರ್ಚನಲ್ಲಿ ಚಿಕಿತ್ಸೆ ನೀಡಲಾಗುವುದು’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net