ಹಿಮ್ಸ್‌ನ ಕ್ಯಾನ್ಸರ್ ತಪಾಸಣೆ ಕೇಂದ್ರದಲ್ಲಿ ಖಾಲಿ ಹುದ್ದೆಗಳ ನೇಮಕ್ಕೆ ಒತ್ತಾಯ

ಹಿಮ್ಸ್‌ನ ಕ್ಯಾನ್ಸರ್ ತಪಾಸಣೆ ಕೇಂದ್ರದಲ್ಲಿ ಖಾಲಿ ಹುದ್ದೆಗಳ ನೇಮಕ್ಕೆ ಒತ್ತಾಯ
Published on

ಹಾಸನ: ಕಳೆದ 16 ವರ್ಷಗಳ ಹಿಂದೆಯೇ ಹಿಮ್ಸ್‌ನಲ್ಲಿ ಆರಂಭಿಸಿರುವ ಕ್ಯಾನ್ಸರ್ ತಪಾಸಣೆ ಹಾಗೂ ಚಿಕಿತ್ಸೆಗಳ ಕೇಂದ್ರದಲ್ಲಿ ಖಾಲಿ ಇರುವ ಪ್ರಮುಖ ಹುದ್ದೆಗಳನ್ನು ಶೀಘ್ರದಲ್ಲೇ ನೇಮಿಸಿಕೊಳ್ಳಬೇಕು ಎಂದು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ವೈ.ಎಸ್.ವೀರಭದ್ರಪ್ಪ ಒತ್ತಾಯಿಸಿದರು.
ಪ್ರಸ್ತುತ ಕ್ಯಾನ್ಸರ್ ಕೇಂದ್ರದ ಮುಖ್ಯಸ್ಥರಾಗಿದ್ದ ಡಾ.ರವಿಕಿರಣ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಸ್ಥಾನದ ಜತೆಗೆ ಇನ್ನೂ ಒಬ್ಬರು ಸೀನಿಯರ್ ರೆಸಿಡೆಂಟ್ ರೇಡಿಯೇಷನ್ ಆಂಕಾಲಜಿ ಎಂ.ಡಿ. ಹುದ್ದೆಗಳನ್ನು ಕೂಡಲೇ ನೇಮಕ ಮಾಡಲು ತುರ್ತು ಆದೇಶ ನೀಡಬೇಕಾಗಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸರ್ಕಾರಕ್ಕೆ ಮನವಿ ಮಾಡಿದರು.
ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್) ಕ್ಯಾನ್ಸರ್ ಕೇಂದ್ರದಲ್ಲಿ ಕ್ಯಾನ್ಸರ್ ತಪಾಸಣೆ ಹಾಗೂ ಚಿಕಿತ್ಸೆಗಳ ಕೇಂದ್ರದ ಬೆಳವಣಿಗೆಗೆ ಹಿಂದಿನ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಅಂದಿನಿಂದ 2019ರವರೆಗೂ ಚೆನ್ನಾಗಿ ನಡೆದ ಕ್ಯಾನ್ಸರ್ ವಿಕಿರಣ ಚಿಕಿತ್ಸಾ ಘಟಕ, ಕೊರೊನಾ ಸೇರಿ ಇತರೆ ಕಾರಣಾಂತರಗಳಿಂದ ನಿಂತು ಹೋಗಿತ್ತು. ಬಳಿಕ ಪುನಾರಂಭಗೊಂಡ ವಿಭಾಗವು, ಭೋಧಕ ವಿಭಾಗವಾಗಿ ಪರಿವರ್ತನೆಗೊಂಡು ಸಿಬ್ಬಂದಿಯೂ ನೇಮಕಗೊಂಡರು. ಇಂದಿನವರೆಗೆ ಪೂರ್ಣ ಪ್ರಮಾಣದ ಸಲಹಾ ಕೇಂದ್ರ ಹಾಗು ಉಚಿತ ಕಿಮೋಥೆರಪಿ ಚಿಕಿತ್ಸಾ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ನಾಗರಿಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಿ.ಕೆ. ಮಂಜುನಾಥ್, ಉಪಾಧ್ಯಕ್ಷ ಬಾಳ್ಳು ಗೋಪಾಲ್, ಸದಸ್ಯರಾದ ಡಾ.ಸಿ.ಎನ್.ಜಗದೀಶ್, ಮಹಾಲಕ್ಷ್ಮೀ, ದೊಡ್ಡಯ್ಯ, ಡಾ.ಹೇಮಾಲತಾ, ಖಜಾಂಚಿ ಕೆ.ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net