

ಹಾಸನ: ನವದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭಕ್ಕೆ ಹಾಸನ ಹಿಮ್ಸ್‌ನ ಕಾಲೇಜಿನ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳಾದ ಡಾ.ವಿ.ಕೆ .ಚಿನ್ಮಯಿ.ಹಾಗೂ ಡಾ.ಎ.ಪಿ .ರಾಜೇಂದ್ರ ಸಾಕ್ಷಿಯಾಗಲಿದ್ದಾರೆ.
ದೇಶದಲ್ಲಿ ಒಟ್ಟು 200 ಹಾಗೂ ಕರ್ನಾಟಕದಿಂದ 22 ಎನ್.ಎಸ್.ಎಸ್ ಸ್ವಯಂ ಸೇವಕರಲ್ಲಿ, ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ ಇಬ್ಬರು ವಿದ್ಯಾರ್ಥಿಗಳು ಈ ಅವಿಸ್ಮರಣೀಯ ಸಮಾರಂಭಕ್ಕೆ ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
2023-24 ನೇ ಸಾಲಿನಲ್ಲಿ ದೇಶದ ಪ್ರಧಾನಮಂತ್ರಿಗಳು ಉದ್ಘಾಟಿಸಿದ ಮೇರಿ ಮಾತಿ ಮೇರಾ ದೇಶ್ ಕಾರ್ಯಕ್ರಮದಲ್ಲಿ ಸಂಸ್ಥೆಯ ಎನ್.ಎನ್.ಎಸ್. ಘಟಕದ ಸಕ್ರಿಯ ಭಾಗವಹಿಸಿಕೆಯನ್ನು ಗುರುತಿಸಿ ಇಬ್ಬರು ಸ್ವಯಂಸೇವಕರಿಗೆ ಅವಕಾಶ ಕಲ್ಪಿಸಲಾಗಿದೆ.
ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ತನ್ನ ವಿಭಿನ್ನ ಸೇವೆಗಳ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಅದೇ ರೀತಿ ಕಳೆದ 10 ವರ್ಷಗಳಿಂದ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸಾಮಾಜದ ಅಭಿವೃದ್ದಿಗೆ ಪೂರಕವಾಗಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಗ್ರಾಮ ವಾಸ್ತವ್ಯ ಶಿಬಿರಗಳು, ಆರೋಗ್ಯ ಶಿಬಿರಗಳು, ರಕ್ತದಾನ ಶಿಬಿರ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು, ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಹಾಗೂ ಇನ್ನೀತರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
ಸಂಸ್ಥೆಯ ನಿರ್ದೇಶಕ ಡಾ.ಬಿ.ರಾಜಣ್ಣ , ಪ್ರಾಂಶುಪಾಲ ಡಾ.ಬಿ.ಸಿ.ರವಿಕುಮಾರ್, ಮುಖ್ಯ ಆಡಳಿತಾಧಿಕಾರಿ ರೇಖಾ, ಎನ್.ಎಸ್.ಎಸ್.ಸಲಹಾ ಸಮಿತಿಯ ಸದಸ್ಯರುಗಳಾದ ಡಾ.ಜಿ.ಪ್ರವೀಣ್, ಡಾ.ಬಿ.ಎಸ್.ಪ್ರಕಾಶ್, ಡಾ.ಆರ್.ಪುರುಷೋತ್ತಮ್, ಕಾರ್ಯಕ್ರಮಾಧಿಕಾರಿಗಳಾದ ನಿಚಿತಾ ಕುಮಾರಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಆಯ್ಕೆಯಾದ ಸ್ವಯಂಸೇವಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.