ಹಿಮ್ಸ್ ನಿರ್ದೇಶಕ ಸ್ಥಾನಕ್ಕೆ ಬಿ.ಸಿ.ರವಿಕುಮಾರ್ ರಾಜೀನಾಮೆ

ಹಿಮ್ಸ್ ನಿರ್ದೇಶಕ ಸ್ಥಾನಕ್ಕೆ ಬಿ.ಸಿ.ರವಿಕುಮಾರ್ ರಾಜೀನಾಮೆ
Published on

 ಹಾಸನ: ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ 8 ವರ್ಷಗಳಿಂದ ಹಿಮ್ಸ್ ನಿರ್ದೇಶಕರು ಹಾಗೂ ಡೀನ್ ಆಗಿದ್ದ ರವಿಕುಮಾರ್, ವೈದ್ಯಕೀಯ ಶಿಕ್ಷಣ ಸಚಿವರು, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಈ ಹುದ್ದೆಗೆ ಸ್ವಯಂಪ್ರೇರಿತನಾಗಿ ರಾಜೀನಾಮೆ ನೀಡುತ್ತಿದ್ದು, ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ.

‘ನಾನು ನಿರ್ದೇಶಕನಾಗಿದ್ದ ಅವಧಿಯಲ್ಲಿ ಅತ್ಯಂತ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದೇನೆ. ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸಾ ಸೌಲಭ್ಯ ಹಾಗೂ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶೈಕ್ಷಣಿಕ ವಾತಾವರಣ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಿದ್ದೇನೆ,’ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

‘ಸರ್ಕಾರ ಹಾಗೂ ಸಂಸ್ಥೆಯ ಎಲ್ಲರ ಸಹಕಾರದಿಂದ ನಾನು ನಿಗದಿಪಡಿಸಿದ್ದ ಎಲ್ಲ ಗುರಿಗಳು ಈಗ ಈಡೇರಿದಂತಾಗಿದ್ದು, ಸಂಸ್ಥೆಗೆ ಎರಡು ಬಾರಿ ಕಾಯಕಲ್ಪ ಪ್ರಥಮ ಪ್ರಶಸ್ತಿ, 2 ಬಾರಿ ಬೆಸ್ಟ್ ಎನ್‌ಎಸ್‌ಎಸ್ ಪ್ರಶಸ್ತಿ, ಎರಡು ಬಾರಿ ಎಬಿ ಆರ್ಕ್ ಪರ್ಫಾಮೆನ್ಸ್ ಪ್ರಶಸ್ತಿ,ಪುರಸ್ಕಾರ, ಪ್ರತಿಷ್ಠಿತ ರಾಷ್ಟ್ರೀಯ ಮಾನ್ಯತೆಗಳಾದ ಎನ್‌ಎಬಿಎಚ್, ಎನ್‌ಎಬಿಎಲ್, ಎನ್‌ಕ್ಯೂಎಎಸ್, ಎಲ್‌ಎಕ್ಯೂಎಸ್‌ಎಚ್‌ವೈಎ, ಎಂಯುಎಸ್‌ಕ್ಯೂಎಎನ್ ಮುಂತಾದ ಮಾನ್ಯತೆ ಗಳಿಸಲು ಯಶಸ್ವಿಯಾಗಿದೆ. ಸಂಸ್ಥೆಯು ಪ್ರಸ್ತುತ ಇಡೀ ರಾಜ್ಯದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ ಗುರಿ ಸಾಧಿಸಿದ ಹೆಮ್ಮೆ ಹಾಗೂ ಸಂಪೂರ್ಣ ಆತ್ಮತೃಪ್ತಿಯೊಂದಿಗೆ ನಿರ್ದೇಶಕರ ಹುದ್ದೆಗೆ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದೇನೆ. ದಯಮಾಡಿ ನನ್ನ ರಾಜೀನಾಮೆ ಅಂಗೀಕರಿಸಿ ಆದಷ್ಟು ಶೀಘ್ರವಾಗಿ ನನ್ನನ್ನು ಹುದ್ದೆಯಿಂದ ಬಿಡುಗಡೆ ಮಾಡಿ. ಈ ಅವಧಿಯಲ್ಲಿ ತಮಗೆ ಸಹಕಾರ ನೀಡಿದ ಅಧಿಕಾರಿಗಳಿಗೆ, ಸಂಸ್ಥೆಯ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಹೋದ್ಯೋಗಿಗಳಿಗೆ, ಹೊರಗುತ್ತಿಗೆ ನೌಕರರಿಗೆ, ವಿದ್ಯಾರ್ಥಿಗಳಿಗೆ, ರಾಜಕೀಯ ಮುಖಂಡರಿಗೆ ಧನ್ಯವಾದ, ಎಂದು ಹೇಳಿದ್ದಾರೆ.

ರವಿಕುಮಾರ್ ವಿರುದ್ಧ ಹಲವು ಆರೋಪ

ಮಂಗಳವಾರ ರಾಜೀನಾಮೆ ಸಲ್ಲಿಸಿರುವ ರವಿಕುಮಾರ್ ವಿರುದ್ಧ ಹಿಂದೆ ಹಲವು ಆರೋಪ ಕೇಳಿ ಬಂದಿದ್ದವು. ನಕಲಿ ಪ್ರಮಾಣಪತ್ರ ನೀಡಿ ಹಿಮ್ಸ್ ನಿರ್ದೇಶಕ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದೂ ದೂರಲಾಗಿತ್ತು. ಇತ್ತೀಚೆಗೆ ನ್ಯಾಯಾಧೀಶರಿಗೂ ರವಿಕುಮಾರ್ ವಿರುದ್ಧ ದೂರು ಸಲ್ಲಿಕೆಯಾಗಿತ್ತು ಎನ್ನಲಾಗಿದೆ. ಇದರ ನಡುವೆ ರವಿಕುಮಾರ್ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ನನ್ನ ಕೆಲಸ ತೃಪ್ತಿ ತಂದಿದೆ: ರವಿಕುಮಾರ್

ನಾನು ಹಿಮ್ಸ್ ನಿರ್ದೇಶಕನಾಗಿ 8.4 ವರ್ಷ ಸೇವೆ ಸಲ್ಲಿಸಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ಯಾವುದೇ ಒಂದೇ ಒಂದು ಗುರುತರವಾದ ಆಪಾದನೆಗಳಿಲ್ಲದೆ ಮಾದರಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ನನಗೆ ಅತ್ಯಂತ ತೃಪ್ತಿ ತಂದಿದೆ ಎಂದು ಡಾ. ರವಿಕುಮಾರ್ ಹೇಳಿದರು.

ನನ್ನ ಸೇವಾ ಅವಧಿಯಲ್ಲಿ ಸಂಸ್ಥೆಯಲ್ಲಿ ಪ್ರಾಮಾಣಿಕವಾಗಿ ರೋಗಿಗಳ ಹಿತದೃಷ್ಟಿಯಿಂದ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ್ದೇನೆ. ನನ್ನ ಅವಧಿಯಲ್ಲಿ ಸಾಕಷ್ಟು ಅಡೆತಡೆಗಳು ಬಂದರೂ ಕೂಡ ಅದ್ಯಾವುದನ್ನು ಲೆಕ್ಕಿಸದೆ ಜನರಿಗೆ ಪ್ರಾಮಾಣಿಕ ಕೆಲಸ ಮಾಡಿರುವ ತೃಪ್ತಿ ನನಗಿದೆ. ಯಾವುದೇ ಒತ್ತಡದಿಂದಲಾಗಲಿ ಅಥವಾ ಬೇರೆ ಯಾವುದೇ ಉದ್ದೇಶದಿಂದ ನಾನು ರಾಜೀನಾಮೆ ನೀಡಿಲ್ಲ. ಎಲ್ಲ ಕೆಲಸಗಳನ್ನು ಕೂಡ ಚಾಚುತಪ್ಪದೇ ಮಾಡಿದ್ದೇನೆ. ಮುಂದೆ ಬರುವವರು ಕೂಡ ಈ ಸಂಸ್ಥೆಯನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯಲಿ ಎಂಬುದು ನನ್ನ ಆಶಯ. ಮುಂದೆ ಬರುವವರಿಗೆ ನನ್ನ ಸಂಪೂರ್ಣ ಸಹಕಾರವಿರುತ್ತದೆ. ನನಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೂಡ ತುಂಬು ಹೃದಯ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net