

ಹಾಸನ: ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೂತನ ನಿರ್ದೇಶಕರಾಗಿ ಸರ್ಕಾರ ನನ್ನನ್ನು ನೇಮಕ ಮಾಡಿದ್ದು ನನ್ನ ಅವಧಿಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ಸೌಲಭ್ಯ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗೆ ಬೇಕಾದಂತಹ ಸವಲತ್ತುಗಳನ್ನು ಒದಗಿಸುವುದು ನನ್ನ ಮೊದಲ ಗುರಿಯಾಗಿದೆ ಎಂದು ಹಿಮ್ಸ್‌ನ ನೂತನ ಪ್ರಭಾರಿ ನಿರ್ದೇಶಕ ಡಾ.ಎಸ್.ವಿ. ಸಂತೋಷ್ ಹೇಳಿದರು.
ಹಿಮ್ಸ್ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ನಿರ್ದೇಶಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರ ಸಲಹೆ, ಸೂಚನೆಯಂತೆ ಮತ್ತು ಎಲ್ಲಾ ಸಿಬ್ಬಂದಿ ಹಾಗೂ ವೈದ್ಯರ ಸಹಕಾರದಿಂದ ಸಂಸ್ಥೆಯಲ್ಲಿ ಇನ್ನು ಉತ್ತಮವಾಗಿ ಕೆಲಸ ಮಾಡುವ ಮೂಲಕ ಎಲ್ಲರ ವಿಶ್ವಾಸ ಗಳಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಲ ಕಟ್ಟಡದ ಕಾಮಗಾರಿಗಳು ಪೂರ್ಣಗೊಂಡಿದ್ದು ಅವುಗಳನ್ನು ಉದ್ಘಾಟನೆ ಮಾಡಬೇಕಾಗಿದೆ. ಅಲ್ಲದೆ ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರೋಗಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಚಿಕಿತ್ಸೆ ನೀಡುವ ದೃಷ್ಟಿಯಿಂದ ವೈದ್ಯರ ಜತೆ ಸಮಾಲೋಚನೆ ನಡೆಸಲಾಗುವುದು. ಅಲ್ಲದೆ ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವಂತಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ಬದಲಾವಣೆಗಳ ಜತೆಗೆ ಅವರ ಶೈಕ್ಷಣಿಕ ಗುಣಮಟ್ಟ ಮತ್ತು ಸಂಶೋಧನೆಗೆ ಅನುಕೂಲವಾಗುವ ರೀತಿಯಲ್ಲಿ ವಾತಾವರಣವನ್ನು ನಿರ್ಮಾಣ ಮಾಡಿಕೊಡಲಾಗುವುದು ಎಂದು ಹೇಳಿದರು.
ನಾನು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನವನಾಗಿದ್ದು ದಾವಣಗೆರೆ ಮತ್ತು ಹಾವೇರಿ ನನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ನಂತರ ವೈದ್ಯ ವೃತ್ತಿಯನ್ನ ಆರಂಭಿಸಿದೆ. 2018ರಲ್ಲಿ ಹಾಸನ ಹಿಮ್ಸ್ ಆಸ್ಪತ್ರೆಗೆ ಪ್ರಾಧ್ಯಾಪಕನಾಗಿ ನೇಮಕಗೊಂಡೆ. ಅಲ್ಲಿಂದ ಇಲ್ಲಿಯವರೆಗೆ ಸಂಸ್ಥೆಯಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಬಂದಿದ್ದೇನೆ. ಆದ್ದರಿಂದ ಸರ್ಕಾರ ನನ್ನನ್ನು ಪ್ರಭಾರಿ ನಿರ್ದೇಶಕನನ್ನಾಗಿ ನೇಮಕ ಮಾಡಿದೆ ಎಂದು ಹೇಳಿದರು.
ಈಗಾಗಲೇ ನಮ್ಮ ಸಂಸ್ಥೆಗೆ ಹಲವು ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಮುಂದೆಯೂ ಕೂಡ ಎಲ್ಲರ ವಿಶ್ವಾಸ ಗಳಿಸಿ ಸಂಸ್ಥೆಯನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡಲಾಗುವುದು ಎಂದು ಭರವಸೆ ನೀಡಿದರು.