

ಹಾಸನ: ಹಿಮೋಫಿಲಿಯಾ ಸಮಸ್ಯೆ ಯಾರಲ್ಲಾದರೂ ಕಾಣಿಸಿಕೊಂಡರೆ ಪ್ರಾರಂಭದಲ್ಲೇ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ಎಚ್.ಆರ್. ದೇವದಾಸ್ ಹೇಳಿದರು.
ನಗರದ ಬಿ.ಎಂ. ರಸ್ತೆ ಬಳಿ ಇರುವ ಖಾಸಗಿ ಹೋಟೆಲೊಂದರ ಸಭಾಂಗಣದಲ್ಲಿ ಹಿಮೋಫಿಲಿಯಾ ಸೊಸೈಟಿ ಹಾಗೂ ಇಂಟಾಸ್ ಫೌಂಡೇಷನ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಸೆಲ್ಪ್ ಇನ್ ಫ್ಯೂಜನ್ ತರಬೇತಿ ಹಾಗೂ ಫಿಜಿಯೋಥೆರಪಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷರಾಗಿರುವ ದಾವಣಗೆರೆಯ ಡಾ. ಸುರೇಶ್ ಅವರು ನನ್ನ ಸಹಪಾಠಿ. ನಾವು ಜತೆಯಲ್ಲಿ ಓದುವಾಗ ಅವರು ಚನ್ನಾಗಿಯೇ ಇದ್ದರು. ನಂತರದಲ್ಲಿ ಉಂಟಾದ ಹಿಮೋಫಿಲಿಯಾ ಕಾಯಿಲೆಯಿಂದ ಅಂಗಗಳ ಊನತೆ ಉಂಟಾಗಿ ನಡೆದಾಡಲು ಆಗದಂತಹ ಪರಿಸ್ಥಿತಿ ತಲುಪಿದರು. ಇಂತಹ ರೋಗಿಗಳಿಗೆ ಏನಾದರೂ ಸಹಾಯ ಮಾಡಬೇಕೆಂದು ಎಲ್ಲಾ ಕಡ ತಿರುಗಾಡಿ ಭಾರತ ಸರಕಾರ, ರಾಜ್ಯ ಸರಕಾರದಿಂದ ಏನು ಸೌಲಭ್ಯವಿದೆ ಹಾಗೂ ಹಿಮೋಫಿಲಿಯಾ ರೋಗಿಗಳಿಗೆ ಉಚಿತವಾಗಿ ಏನೆಲ್ಲಾ ಸೌಲಭ್ಯ ಕೊಡಬಹುದು ಎಂಬುದರ ಬಗ್ಗೆ ಬಹಳ ಶ್ರಮಪಟ್ಟು ಕೆಲಸ ಮಾಡಿದರು. ಈಗಲೂ ಇದರ ವಿಷಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಒಂದು ರಕ್ತನಿಧಿಯನ್ನು ಕೂಡ ಪ್ರಾರಂಭಿಸಿದ್ದಾರೆ. ಎಲ್ಲವನ್ನೂ ಉಚಿತ ಸೇವೆ ಕೊಡುತ್ತಿದ್ದಾರೆ. ರೋಗಿಗಳು ಯಾರು ದೈರ್ಯ ಕಳೆದುಕೊಳ್ಳಬಾರದು. ಹಿಮೋಫಿಲಿಯಾ ಬಂದಾಗ ಮೊದಲ ಹಂತದಲ್ಲೇ ಅದನ್ನು ಪತ್ತೆ ಮಾಡಿ, ಅದು ಹೆಚ್ಚು ಮುಂದುವರೆಯದ ಹಾಗೆ ಸೂಕ್ತ ಪರೀಕ್ಷೆಗೆ ಒಳಗಾಗಿ ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಪತ್ರಕರ್ತರಾದ ಆರ್.ಪಿ. ವೆಂಕಟೇಶ್ ಅವರು ಮಾತನಾಡಿ, ಹಿಮೋಫಿಲಿಯಾ ಬಂದಾಗ ಯಾರೂ ಧೃತಿಗೆಡಬಾರದು. ಸಮಸ್ಯೆ ಆದ ಕೂಡಲೇ ಸಂಬಂಧಪಟ್ಟ ವೈದ್ಯರ ಬಳಿ ಪರೀಕ್ಷಿಸಿಕೊಂಡು ಚಿಕತ್ಸೆ ಪಡೆಯುವ ಮೂಲಕ ಉತ್ತಮ ಜೀವನ ನಿಮ್ಮದಾಗಿಸಿಕೊಳ್ಳಬೇಕು. ಇಂದಿನ ಕಾಲಘಟ್ಟದಲ್ಲಿ ನಮ್ಮ ಜೀವನಶೈಲಿಯನ್ನು ಸ್ವಲ್ಪವಾದರೂ ಬದಲಾಯಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
ಇದೇ ವೇಳೆ ಹಿಮೋಫಿಲಿಯಾ ಸೊಸೈಟಿಯ ಕಾರ್ಯದರ್ಶಿ ಎಚ್.ಕೆ. ಪಾಲಾಕ್ಷ, ಅಧ್ಯಕ್ಷ ಹರೀಶ್, ಇಂಟಾಸ್ ಫೌಂಡೇಷನ್ ಕುದ್ಸಿಯಾ ಭೇಗಂ, ಸಂಜೀವಿನಿ ಆಸ್ಪತ್ರೆಯ ಫಿಜಿಯೋಥೇರಪಿಸ್ಟ್ ಸುಪ್ರೀತಾ ಇತರರು ಉಪಸ್ಥಿತರಿದ್ದರು.