ಹಿಪ್ಪುನೇರಳೆಗೆ ಹೊಸ ಕೀಟ ಬಾಧೆ; ಹಗಲಿನಲ್ಲಿ ಮಣ್ಣೊಳಗೆ ಸೇರಿಕೊಳ್ಳುವ ಹುಳು ರಾತ್ರಿ ವೇಳೆ ಎಲೆ ತಿನ್ನುತ್ತದೆ

22CBP2
Published on

ಎನ್.ವೆಂಕಟೇಶ್

ಚಿಕ್ಕಬಳ್ಳಾಪುರ: ಹಿಪ್ಪುನೇರಳೆಗೆ ರಾತ್ರಿ ಕಳ್ಳ ಹುಳುವಿನ ಕಾಟ ಶುರುವಾಗಿದ್ದು, ರೇಷ್ಮೆ ಬೆಳೆಗಾರರು ಮುಂಜಾಗ್ರತೆ ಕೈಗೊಳ್ಳದಿದ್ದಲ್ಲಿ ರೈತರಿಗೆ ನಷ್ಟ ಕಟ್ಟಿಟ್ಟ ಬುತ್ತಿ. ದಕ್ಷಿಣ ಭಾರತದ ಹವಾಮಾನದಲ್ಲಿ ಹಿಪ್ಪುನೇರಳೆಯನ್ನು ವರ್ಷಪೂರ್ತಿ ಬೆಳೆಯಬಹುದಾಗಿದ್ದು, ಹುಳು ಸಾಕಾಣಿಕೆಗೆ ಅನುಕೂಲವಾಗಿದೆ. ಇದೇ ವೇಳೆ ಎಲೆಸುರುಳಿ ಕೀಟ, ನುಸಿ, ಹೇನು, ಪಪಾಯ ಮೀಲಿ ಬಗ್, ಶಂಖದ ಹುಳು, ಓಡುಹುಳು (ಬೀಟಲ್ಸ್) ಸೇರಿ ನಾನಾ ಕೀಟಗಳ ಹಾವಳಿ ಕಾಡುತ್ತದೆ. ಇದರ ಜತೆಗೆ ರೇಷ್ಮೆ ಸೊಪ್ಪನ್ನು ರಾತ್ರಿಯೇ ದನ ಮೇಯ್ದಂತೆ ಕಾಣೆ ಮಾಡುವ ಹುಳುವೊಂದು ರಾಮನಗರದ ಅಚ್ಚಲು, ಕವಣಾಪುರದ ಹಿಪ್ಪುನೇರಳೆ ತೋಟಗಳಲ್ಲಿ ಕಂಡು ಬಂದಿದ್ದು ಇದು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಳೆಗಾರರು ಈಗಲೇ ಎಚ್ಚರಿಕೆ ವಹಿಸಬೇಕಾಗಿದೆ.

ಕೀಟ ಹಾವಳಿಯ ಲಕ್ಷಣಗಳು: ಕಡ್ಡಿ ಕಟಾವಾದ 10-15 ದಿನದ ತೋಟದಲ್ಲಿ ಒಮ್ಮೆಯೇ ಸೊಪ್ಪು ಖಾಲಿಯಾಗುತ್ತದೆ. ಹಗಲಿನಲ್ಲಿ ಪರಿಶೀಲಿಸಿದಾಗ ಅರೆ ಬರೆ ತಿಂದ ಗಿಡಗಳ ಸೊಪ್ಪಿನ ಮೇಲೆ ಹಿಕ್ಕೆ, ಹಾನಿಯಾದ ಗಿಡಗಳ ಬುಡದಲ್ಲಿ ಮಣ್ಣು ಕೆದಕಿದಾಗ ಹಸಿರು ಕಂದು ಬಣ್ಣದ ಹುಳುಗಳು ಹಾಗೂ ಕೆಂಪು ಬಣ್ಣದ ಪ್ಯೂಪಗಳು ಕಾಣುತ್ತವೆ. ರಾತ್ರಿಯಲ್ಲಿ ಅಸಂಖ್ಯ ಹುಳುಗಳು ಸೊಪ್ಪು ತಿನ್ನುತ್ತಿರುವುದು ಗೊತ್ತಾಗುತ್ತದೆ.

ಹುಳುವಿನ ಸಾಮರ್ಥ್ಯ: ಈ ಹೊಸ ಕೀಟ ಹಾವಳಿಯನ್ನು ವೈಜ್ಞಾನಿಕವಾಗಿ ಸೋಡೋಪ್ಟೇರಾ ಲಿಟ್ಯೂರ ಎಂಬುದಾಗಿ ಗುರುತಿಸಲಾಗಿದೆ. ಸಾಮಾನ್ಯವಾಗಿ ಹೊಗೆಸೊಪ್ಪಿನ ಎಲೆಕತ್ತರಿಸುವ ಹುಳು ಟ್ರಾಫಿಕಲ್ ಆರ್ಮಿ ವರ್ಮ್ ಎಂದು ಕರೆಯಲಾಗಿದೆ. ಇದರ ಪತಂಗವು ರಾತ್ರಿ ಹೊತ್ತಿನಲ್ಲಿ ಚಟುವಟಿಕೆಯಿಂದ ಇರುತ್ತದೆ. ಪ್ರತಿ ಪತಂಗವು 800-900 ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಹೊಂದಿದೆ. ಒಂದೊಂದು ಗಿಡದ ಮೇಲೆ 200ರಿಂದ 300 ಮೊಟ್ಟೆಗಳನ್ನು ಗುಂಪಾಗಿ ಇಟ್ಟು, ಎರಡನೆಯ ಹಂತದ ನಂತರ ಗಿಡವೊಂದಕ್ಕೆ 3-4 ಹುಳುಗಳು ಹಂಚಿಕೆಯಾಗಿ ರಾತ್ರಿ ಹೊತ್ತಿನಲ್ಲಿ ಸೊಪ್ಪನ್ನು ಒಂದೇ ಸಮನೆ ತಿಂದು ಹಾಕುತ್ತವೆ. ಹಗಲಿನಲ್ಲಿ ಮಣ್ಣೊಳಗೆ ಅಡಗಿರುತ್ತವೆ. ಇದರ ಜೀವನ ಚಕ್ರವು 35 ದಿನದಲ್ಲಿ ಮುಕ್ತಾಯವಾಗುತ್ತದೆ.

ಪರಿಹಾರ ಕ್ರಮಗಳು: ಕಡ್ಡಿ ಕಟಾವಾದ 15 ದಿನದಲ್ಲಿ ರೆಂಬೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಗುಂಪು ಗುಂಪಾಗಿ ಇಡಲ್ಪಟ್ಟ ಮೊಟ್ಟೆ ಹಾಗೂ ಚಾಕಿ ಮರಿಗಳನ್ನು ಗುರುತಿಸಿ ನಾಶಪಡಿಸಬೇಕು. ಸೊಪ್ಪು ಖಾಲಿಯಾಗುವ ಹಂತ ತಲುಪಿದ್ದಲ್ಲಿ ಹಗಲಿನಲ್ಲಿ ಬುಡವನ್ನು ಕೆದಕಿ ಹುಳುಗಳನ್ನು ಹಿಡಿದು ನಾಶಪಡಿಸಬಹುದು. ಅಕ್ಕಿ ತೌಡು 25 ಕೆ.ಜಿ, ಬೆಲ್ಲ 6.5 ಕೆ.ಜಿ ಹಾಗೂ 12.5 ಲೀಟರ್ ನೀರು ಮತ್ತು ಇಮ್ಯಾಕ್ಟಿನ್ ಬೆಂನ್ಸೋಯೇಟ್ 5ಎಸ್‌ಜಿ 200 ಮಿ.ಲೀ ಸೇರಿಸಿ, ಒಂದು ದಿನದಲ್ಲಿ ಹುಳಿಯಾಗಿಸಿದ ಬಳಿಕ ಉಂಡೆಗಳನ್ನಾಗಿ ಮಾಡಿ ತೋಟದಲ್ಲಿ ಅಲ್ಲಲ್ಲಿ ಇಡಬೇಕು. ಇದಕ್ಕೆ ಆಕರ್ಷಣೆಗೊಂಡ ಹುಳುಗಳನ್ನು ನಾಶಪಡಿಸಬಹುದು, ಇಲ್ಲವೇ ಸೋಲಾರ್ ಟ್ರಾಪ್‌ಗಳನ್ನು ಬಳಸಬಹುದು. ಯಾವುದೇ ಕಾರಣಕ್ಕೂ ಕೀಟನಾಶಕದ ಮೊರೆ ಹೋಗಬಾರದು.

ಜೈವಿಕ ವಿಧಾನವು ಪರಿಣಾಮಕಾರಿ: ಈ ಪೀಡೆಯನ್ನು ನಿಯಂತ್ರಿಸಲು ಜೈವಿಕ ವಿಧಾನವು ಪರಿಣಾಮಕಾರಿ. ಇದರ ಹುಳುವಿನ ಮೇಲೆ ಮೊಟ್ಟೆ ಇಡುವ ಬ್ರಾಕೊನ್ ಬ್ರೇವಿಕಾರ್ನಿಸ್ ಮತ್ತು ಕೋಶದ ಮೇಲೆ ಮೊಟ್ಟೆಯಿಟ್ಟು ನಾಶಪಡಿಸುವ ಟೆಟ್ರಾಸೈ ್ಟಕಸ್ ಹೊವಾರ್ಡಿ ಎನ್ನುವ ಪರಾವಲಂಬಿ ಕೀಟಗಳನ್ನು ಒಟ್ಟಿಗೆ ಬಿಡುಗಡೆಗೊಳಿಸಿ ಪೀಡೆಯನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು. ಈ ಪರತಂತ್ರ ಜೀವಿಗಳು ಮೈಸೂರಿನ ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಹಾಗೂ ಬೆಂಗಳೂರಿನ ಹೆಬ್ಬಾಳದ ಎನ್‌ಬಿಎಐಆರ್ ಲಭ್ಯವಿದೆ. ಮಾಹಿತಿಗೆ ರೇಷ್ಮೆ ಇಲಾಖೆ ಸಂಪರ್ಕಿಸಬಹುದಾಗಿದೆ.

ರಾಮನಗರದಲ್ಲಿ ಈಗಾಗಲೇ ಹಿಪ್ಪು ನೇರಳೆ ಸೊಪ್ಪಿಗೆ ಹೊಸ ಕೀಟ ಬಾಧೆ ಕಾಣಿಸಿಕೊಂಡಿದೆ. ಈ ಭಾಗದಲ್ಲಿ ನಷ್ಟ ಉಂಟಾಗದಿರಲು ಬೆಳೆಗಾರರು ಮುಂಜಾಗ್ರತೆ ಪಾಲಿಸಬೇಕು. ಯಲುವಹಳ್ಳಿ ಸೊಣ್ಣೇಗೌಡ, ಜಿಲ್ಲಾ ರೇಷ್ಮೆ ಹಿತರಕ್ಷಣಾ ವೇದಿಕೆ ಸಂಚಾಲಕ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net