ಹಿಪ್ಪುನೇರಳೆ ಬೆಳೆಯುವ ವಿಧಾನ ಪ್ರಾತ್ಯಕ್ಷಿಕೆ

Published on

ಚಾಮರಾಜನಗರ: ತಾಲೂಕಿನ ಮುಕ್ಕಡಹಳ್ಳಿ ಗ್ರಾಮದ ಪ್ರಸಾದ್ ಅವರ ಜಮೀನಿನಲ್ಲಿ ಗುರುವಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಚಾಮರಾಜನಗರ ಕೃಷಿ ಮಹಾ ವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಹಿಪ್ಪುನೇರಳೆ ಬೆಳೆಯುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

ಈ ವೇಳೆ ಪ್ರಾಧ್ಯಾಪಕ ಡಾ.ಪಿ. ಪ್ರಕಾಶ್ ಮಾತನಾಡಿ, ಹಿಪ್ಪುನೇರಳೆ ರೇಷ್ಮೆ ಹುಳುಗಳು ಮುಖ್ಯ ಆಹಾರವಾಗಿದೆ. ಇದು ಬಹುಬೇಗನೆ ಬೆಳೆಯುವ ಬಹುವಾರ್ಷಿಕ ಸಸ್ಯವಾಗಿದೆ. ಬೆಳೆಯಲು ಮಣ್ಣಿನ ಗುಣಮಟ್ಟ, ನೀರಿನ ಸೌಕರ್ಯ ಗೊಬ್ಬರ ಹಾಗೂ ಕೃಷಿ ಪದ್ಧತಿ ಮುಖ್ಯವಾಗಿದೆ. ಆದ್ದರಿಂದ ಹಿಪ್ಪುನೇರಳೆ ಬೆಳೆಯುವ ಪದ್ಧತಿಯನ್ನು ಪ್ರತಿಯೊಬ್ಬರೂ ಚೆನ್ನಾಗಿ ತಿಳಿದುಕೊಳ್ಳಬೇಕು. ಇದರಿಂದ ಉತ್ತಮ ಇಳುವರಿಯನ್ನು ಪಡೆಯುವುದರ ಮೂಲಕ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಬಹುದು ಎಂದು ತಿಳಿಸಿದರು.

ಇದೇ ವೇಳೆ ಸಸ್ಯ ಸಂರಕ್ಷಣೆಯ ಕಿಟ್‌ಅನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಡಲಾಯಿತು. ಮುಕ್ಕಡಹಳ್ಳಿ ಸೇರಿದಂತೆ ಕೇತಳ್ಳಿ, ಗಟ್ಟವಾಡಿಪುರ ಭಾಗದ ರೈತರು ಶಿಬಿರದ ಪ್ರಯೋಜನ ಪಡೆದರು. ಅಲ್ಲದೆ ಬೆಲೆಯ ನಿರ್ವಹಣೆಯ ಮಾಹಿತಿ ನೀಡಲಾಯಿತು. ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಸಂಯೋಜಕ ಡಾ.ಜಿ.ನಾಗೇಶ್, ರೇಷ್ಮೆ ಕೃಷಿ ವಿಜ್ಞಾನಿ ಡಾ.ಎಸ್.ಚಂದ್ರಶೇಖರ ಕಟ್ಟಿಮನಿ, ಸಂಪನ್ಮೂಲ ವ್ಯಕ್ತಿ ಗಣಪತಿ ಭಟ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net