

ನರಗುಂದ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ಮನೆಯ ಹಿತ್ತಲು ಜಾಗವನ್ನು ತನ್ನ ಹೆಸರಿಗೆ ಮಾಡಿಕೊಡಲು ಕಣಕೀಕೊಪ್ಪ ಗ್ರಾಪಂ ಪಿಡಿಒ, ಕಾರ್ಯದರ್ಶಿ 18 ತಿಂಗಳಿನಿಂದ ಅಲೆದಾಡಿಸುತ್ತಿದ್ದಾರೆ ಎಂದು ತಾಲೂಕಿನ ಗುರ್ಲಕಟ್ಟಿ ಗ್ರಾಮದ ಬಿಎಸ್ಎಫ್ ಯೋಧ ಗ್ರಾಮದ ವಸಂತರೆಡ್ಡಿ ವೆಂಕಟರೆಡ್ಡಿ ರಂಗರೆಡ್ಡಿ ಆರೋಪಿಸಿದ್ದಾರೆ.
ಸದ್ಯ ಗುಜರಾತ ರೆಜಿಮೆಂಟ್ 108 ನೇ ಬೆಟಾಲಿಯನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಸಂತರೆಡ್ಡಿ ಸುಮಾರು 20 ವರ್ಷಗಳಿಂದ ಜಮ್ಮ, ಕಾಶ್ಮೀರ, ಪಶ್ಚಿಮ ಬಂಗಾಳ, ಗುಜರಾತ ಸೇರಿದಂತೆ ಹಲವು ಕಡೆಗಳಲ್ಲಿ ಗಡಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸ್ವಗ್ರಾಮ ಗುರ್ಲಕಟ್ಟಿಯಲ್ಲಿ ತಮ್ಮ ಮನೆಯ ಹಿಂದಿರುವ ಸುಮಾರು 30 ಅಡಿ ಜಾಗವನ್ನು ಯೋಧ ತನ್ನ ಹೆಸರಿನಲ್ಲಿ ಉತಾರ ಕೊಡಬೇಕು ಎಂದು ಕಾನೂನು ಬದ್ಧವಾಗಿ ಅರ್ಜಿ ಹಾಕಿದ್ದಾರೆ.
ಆದರೆ, ಕಣಕೀಕೊಪ್ಪ ಗ್ರಾಪಂ ಪಿಡಿಒ ಮಾತ್ರ ಉತಾರ ಕೊಡದೆ ಸತಾಯಿಸುತ್ತಿದ್ದಾರೆ. ಸುಮಾರು 18 ತಿಂಗಳಿನಿಂದ ಗೋಳಾಡಿಸುತ್ತಿದ್ದಾರೆ ಎಂದು ಯೋಧ ವಸಂತರೆಡ್ಡಿ ಆರೋಪಿಸಿದ್ದಾರೆ.
ಯೋಧ ವಸಂತರೆಡ್ಡಿ ತನ್ನ ಪತ್ನಿ ಮತ್ತು ಮೂವರು ಮಕ್ಕಳನ್ನು ಗದಗ ನಗರದಲ್ಲಿ ಬಾಡಿಗೆ ಮನೆಯಲ್ಲಿ ಇಟ್ಟಿದ್ದಾರೆ. ಇನ್ನೇನು ಸರ್ವಿಸ್ ಮುಗಿಯುವ ಹಂತಕ್ಕೆ ಬಂದಿದೆ. ಹೀಗಾಗಿ ಊರಲ್ಲಿನ ತನ್ನ ಹಿತ್ತಿಲಿನಲ್ಲಿ ಒಂದು ಮನೆ ಕಟ್ಟಿಸಿಕೊಳ್ಳಬೇಕು. ಹೆಂಡತಿ ಮಕ್ಕಳೊಡನೆ ಊರಲ್ಲಿರಬೇಕು ಎಂದು ಯೋಧ ತೀರ್ವನಿಸಿದ್ದಾರೆ. ಆದರೆ, ಜಾಗದ ಉತಾರವನ್ನೇ ಕೊಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ.
ಹೀಗಾಗಿ ಸುಮಾರು 18 ತಿಂಗಳಿನಿಂದ ಈ ಯೋಧ ತನ್ನ ದಾಖಲೆಗಳನ್ನು ಹಿಡಿದು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾನೆ. ಉತಾರಕ್ಕಾಗಿಯೇ 30 ದಿನಗಳ ಕಾಲ ರಜೆ ಮೇಲೆ ಗ್ರಾಮಕ್ಕೆ ಬಂದಿದ್ದ ಯೋಧನಿಗೆ ಕಚೇರಿಗೆ ಅಲೆದಾಡುವುದೇ ಕೆಲಸ ಆಗಿತ್ತು. ಇದರಿಂದ ಯೋಧ ಬೇಸತ್ತು ಹೋಗಿದ್ದಾನೆ. ‘ಗಡಿಯಲ್ಲಿ ಯುದ್ಧದ ಛಾಯೆ ಆವರಿಸಿದೆ. ಹಿರಿಯ ಅಧಿಕಾರಿಗಳಿಂದ ಕರೆ ಬರಬಹುದು. ಹೀಗಾಗಿ ನಾನು ಗಡಿಗೆ ಹೋಗಬೇಕು. ಚೀನಿಯರ ವಿರುದ್ಧ ಹೋರಾಡಬೇಕು. ಯುದ್ಧದಲ್ಲಿ ಏನಾದರೂ ಆಗಬಹುದು. ಹೀಗಾಗಿ, ನನ್ನ ಜಾಗ ನನ್ನ ಹೆಸರಿಗೆ ಮಾಡಿಕೊಡಿ’ ಅಂತ ಯೋಧ ಗೋಗರೆದಿದ್ದಾನೆ. ಈ ಸಂಬಂಧ ಗದಗ ಜಿಪಂ ಸಿಇಒ ಕೆ. ಆನಂದ ಅವರಿಗೆ ಮನವರಿಕೆ ಮಾಡಿದ್ದು, ಯೋಧನ ಸಮಸ್ಯೆಯನ್ನು ಬೇಗ ಬಗೆಹರಿಸುವ ಭರವಸೆ ನೀಡಿದ್ದಾರೆ.
ಈ ಸಂಬಂಧ ಈಗಾಗಲೇ ಅನೇಕ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಈ ಯೋಧನಿಗೆ ಯಾರೂ ಸರಿಯಾಗಿ ಸ್ಪಂದಿಸಿಲ್ಲ.
ಗುರ್ಲಕಟ್ಟಿ ಗ್ರಾಮದ ಬಿಎಸ್ಎಫ್ ಯೋಧ ವಸಂತರಡ್ಡಿ ಅವರು ಜಾಗಕ್ಕೆ ಸಂಬಂಧಿಸಿದಂತೆ 2019ರ ಏಪ್ರಿಲ್ 16ರಂದು ನಮ್ಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. 2019 ಜೂನ್ 10ರಂದು ಹಿಂದಿನ ಪಿಡಿಒ ಪಿ.ಕೆ. ಸಾವಳಗಿ ಎಂಬುವರು ಅರ್ಜಿ ಸ್ವೀಕರಿಸಿದ್ದಾರೆ. ಲಾಕ್ಡೌನ್ ವೇಳೆ ಸ್ವಲ್ಪಮಟ್ಟಿಗೆ ತೊಂದರೆ ಆಗಿರಬಹುದು. ಇದೀಗ ಎಲ್ಲವೂ ಸರಿಯಾಗಿದೆ. ಬಾಕಿಯಿರುವ ತೆರಿಗೆ ಪಾವತಿಸಿ ದಾಖಲೆ ಪಡೆಯುವಂತೆ ಹೇಳಿದ್ದೇವೆ. ಆದರೆ, ದಾಖಲೆ ಪಡೆಯದೆ ವಿನಾಕಾರಣ ಹಿರಿಯ ಅಧಿಕಾರಿಗಳು ಮತ್ತು ಮಾಧ್ಯಮದವರ ಮುಂದೆ ಆರೋಪ ಮಾಡುತ್ತಿದ್ದಾರೆ.| ವಿ.ಆರ್. ರಾಯನಗೌಡ್ರ ಕಣಕೀಕೊಪ್ಪ ಗ್ರಾಪಂ ಪಿಡಿಒ