ಹಿತ್ತಲದೊಡ್ಡಿಯಲ್ಲಿ ವಿಜೃಂಭಣೆಯ ಹಾಲರವಿ ಉತ್ಸವ

Published on

ಕೊಳ್ಳೇಗಾಲ: ತಾಲೂಕಿನ ಅರೇಪಾಳ್ಯದ ಶ್ರೀ ಹೊನ್ನೆ ಉಡೆ ಮಹದೇಶ್ವರ ಸ್ವಾಮಿಯ ಕೊಂಡೋತ್ಸವ ಮತ್ತು ಜಾತ್ರೆ ಮಹೋತ್ಸವ ಅಂಗವಾಗಿ ಗುರುವಾರ ಸಂಜೆ ಹಾಲರವಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.

ಹಿತ್ತಲದೊಡ್ಡಿ ಗ್ರಾಮದಲ್ಲಿ ಸಂಜೆ 4 ಗಂಟೆಗೆ ಸಾವಿರಾರು ಜನರ ಸಮ್ಮುಖದಲ್ಲಿ ಹುಲಿ ವಾಹನ ಉತ್ಸವ, ಸತ್ತಿಗೆಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಆರಂಭಿಸಲಾಯಿತು. ಬಳಿಕ ಶ್ರೀ ಹೊನ್ನೆ ಉಡೆ ಮಹದೇಶ್ವರ ದೇವಾಲಯಕ್ಕೆ ಸುಮಾರು ರಾತ್ರಿ 8 ಗಂಟೆಗೆ ಉತ್ಸವ ತಲುಪಿತು. ಮೆರವಣಿಗೆಯಲ್ಲಿ ಪೂಜಾ ಕುಣಿತ, ಡೋಲು ಕುಣಿತ, ವೀರಗಾಸೆ, ಕಂಸಾಳೆ, ಗೊರುವನ ಕುಣಿತ, ನಂದಿ ಕಂಬ ಕುಣಿತ ಗಮನ ಸೆಳೆಯಿತು. ಇದಕ್ಕೂ ಮುನ್ನ ದೇವಾಲಯ ಆವರಣದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.

12 ವರ್ಷಗಳ ಬಳಿಕ ಜಾತ್ರೆ: ಅರೇಪಾಳ್ಯ, ಹಿತ್ತಲದೊಡ್ಡಿ, ಮೊಳೆಕಟ್ಟೆ, ಎರೆಕಟ್ಟೆ ಗ್ರಾಮಗಳಲ್ಲಿ ಶ್ರೀ ಹೊನ್ನೆ ಉಡೆ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. 12 ವರ್ಷಗಳ ಬಳಿಕ ಆಚರಣೆ ಮಾಡುತ್ತಿರುವುದರಿಂದ ಗ್ರಾಮಸ್ಥರು ಕೊಂಡೋತ್ಸವವನ್ನು ವಿಜೃಂಭಣೆಯಿಂದ ಮಾಡುತ್ತಿದ್ದಾರೆ. ಏ.17 ರಂದು ಹಾಲರವಿ ಉತ್ಸವ, ಏ.18 ರಂದು ಬೆಳಗ್ಗೆ 6 ಗಂಟೆಗೆ ಕೊಂಡೋತ್ಸವ ನಿಗದಿಗೊಂಡಿದೆ.

ದೇವಾಲಯ ಆವರಣದಲ್ಲಿ 75 ಅಡಿ ಉದ್ದ 12 ಅಡಿ ಅಗಲಕ್ಕೆ ಮರದ ಕಟ್ಟಿಗೆ ಮತ್ತು ದಿಂಬಿಗಳನ್ನು ಜೋಡಿಸಿ ಕೊಂಡ ನಿರ್ಮಿಸಲಾಗಿದೆ. ಹಾಲರವೆ ಉತ್ಸವ ಮುಗಿದ ಬಳಿಕ ಗ್ರಾಮದ ಮುಖಂಡರು ಕೊಂಡಕ್ಕೆ ಪೂಜೆ ಸಲ್ಲಿಸಿ ಅಗ್ನಿಸ್ಪರ್ಶ ಮಾಡಲಿದ್ದಾರೆ. ಶುಕ್ರವಾರ ಬೆಳಗ್ಗೆ 6 ಗಂಟೆಗೆ ಕೊಂಡೋತ್ಸವ ನಡೆಯಲಿದೆ. ಈ ವೇಳೆ ತಿಮ್ಮರಾಜೀಪುರ ಗ್ರಾಪಂ ಅಧ್ಯಕ್ಷೆ ರಶ್ಮಿ ರಾಜು, ಮಾಜಿ ಅಧ್ಯಕ್ಷೆ ಲಕ್ಷ್ಮೀ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಉಪಾಧ್ಯಕ್ಷ ರಾಜು, ಹಿತ್ತಲದೊಡ್ಡಿ ರಾಜಣ್ಣ, ಕಾಳೇಗೌಡ, ಸೋಮಣ್ಣ, ರಾಮಕೃಷ್ಣ, ನಾಗರಾಜು, ಶಿವಣ್ಣ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net