

ಗೋಕಾಕ: ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಮತ್ತು ಸಿಬಿಸಿ ಕಾಲುವೆಗಳಿಗೆ ಜನ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಇಂದಿನಿಂದ(ಮೇ.26)5 ದಿನಗಳವರೆಗೆ ಒಟ್ಟು 2.17 ಟಿಎಮ್‌ಸಿ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಮೂಡಲಗಿ, ಗೋಕಾಕ, ಹುಕ್ಕೇರಿ, ಚಿಕ್ಕೋಡಿ, ರಾಯಬಾಗ ತಾಲೂಕುಗಳ ಬಹುಗ್ರಾಮ ಕುಡಿಯುವ ನೀರು ಸರಬುರಾಜು ಯೋಜನೆಗಳಿಗೆ ಈ ನೀರು ಬಿಡುಗಡೆಯಿಂದ ಪ್ರಯೋಜನವಾಗಲಿದೆ. ಕೇವಲ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಜಲಾಶಯದಿಂದ ನೀರನ್ನು ಬಿಡಲಾಗುತ್ತಿದೆ. ಬೇಸಿಗೆಯ ಸಮಯದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಘಟಪ್ರಭಾ ಬಲದಂಡೆ ಕಾಲುವೆಗೆ 2000 ಕ್ಯೂಸೆಕ್, ಘಟಪ್ರಭಾ ಎಡದಂಡೆ ಕಾಲುವೆಗೆ 2400 ಕ್ಯೂಸೆಕ್ ಮತ್ತು ಚಿಕ್ಕೋಡಿ ಉಪಕಾಲುವೆಗೆ 500 ಕ್ಯೂಸೆಕ್ ನಂತೆ ಶುಕ್ರವಾರ ಸಂಜೆ 6 ಗಂಟೆಯಿಂದ ಮುಂದಿನ 5 ದಿನಗಳ ವರೆಗೆ ನೀರನ್ನು ಹರಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡಿದ್ದಾರೆ.
ಸಾರ್ವಜನಿಕರ ಹಿತದೃಷ್ಠಿಯಿಂದ ಹಿಡಕಲ್ ಜಲಾಶಯದಿಂದ ನೀರನ್ನು ಹರಿಸುವಂತೆ ಇತ್ತಿಚೆಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರಿಂದ ಜನ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಸಲುವಾಗಿ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಅವರು ಈ ಬಗ್ಗೆ ಕ್ರಮ ಕೈಗೊಂಡಿದ್ದು, ಕುಡಿಯುವ ನೀರಿಗಾಗಿ ಮಾತ್ರ ಬಳಕೆ ಮಾಡುವಂತೆ ರೈತರಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಲಹೆ ನೀಡಿದ್ದಾರೆ.