

ಗೋಕಾಕ: ಹಿಡಕಲ್ ಜಲಾಶಯದಿಂದ , ಜಿಆರ್‌ಬಿಸಿ ಮತ್ತು ಸಿಬಿಸಿ ಕಾಲುವೆಗಳಿಗೆ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಲುವಾಗಿ ಕೂಡಲೇ ನೀರನ್ನು ಬಿಡುಗಡೆ ಮಾಡುವಂತೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬೆಳಗಾವಿ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಈಗಾಗಲೇ ಹಿಡಕಲ್ ಜಲಾಶಯದಲ್ಲಿ 5.93 ಟಿಎಂಸಿ ನೀರು ಸಂಗ್ರಹವಿದೆ. ಹಾಗಾಗಿ ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿಗಾಗಿ ಸೋಮವಾರದಿಂದ ಮೇ.21 ರಿಂದ 7 ದಿನಗಳವರೆಗೆ ನೀರನ್ನು ಬಿಡುವಂತೆ ಅವರು ಆಗ್ರಹಿಸಿದ್ದಾರೆ. ಬೇಸಿಗೆಯ ಬಿಸಿಲಿನಿಂದ ಮೂಡಲಗಿ, ಗೋಕಾಕ, ಹುಕ್ಕೇರಿ, ಚಿಕ್ಕೋಡಿ, ರಾಯಬಾಗ ತಾಲೂಕುಗಳ ವ್ಯಾಪ್ತಿಯಲ್ಲಿರುವ ನೂರಾರು ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ಹಿಡಕಲ್ ಜಲಾಶಯದಿಂದ ಜಿಎಲ್‌ಬಿಸಿ ಕಾಲುವೆಗೆ 2000ಕ್ಯೂಸೆಕ್, ಜಿಆರ್‌ಬಿಸಿ ಕಾಲುವೆಗೆ 2000 ಕ್ಯೂಸೆಕ್ ಸಿಬಿಸಿ ಕಾಲುವೆಗೆ 500 ಕ್ಯೂಸೆಕ್ ಪ್ರತಿದಿನ ನೀರನ್ನು ಹರಿಸುವಂತೆ ತಿಳಿಸಿದ್ದಾರೆ.
ಈ ಕಾಲುವೆಗಳ ವ್ಯಾಪ್ತಿಯಲ್ಲಿರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲಮಟ್ಟ ಹೆಚ್ಚಳವಾಗಿ ತೆರೆದ ಬಾವಿ ಮತ್ತು ಕೊಳವೆ ಬಾವಿಗಳಿಗೆ ನೀರಿನ ಜಲಮೂಲ ಹೆಚ್ಚಾಗುತ್ತದೆ. ಇದರಿಂದ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಹ ಕಡಿಮೆಯಾಗುತ್ತದೆ. ಆದ್ದರಿಂದ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಮತ್ತು ಸಿಬಿಸಿ ಕಾಲುವೆಗಳಿಗೆ ಒಟ್ಟು 2.93 ಟಿಎಂಸಿ ನೀರನ್ನು ತುರ್ತಾಗಿ ಹರಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.