

ದೇವರಹಿಪ್ಪರಗಿ: ತಾಲೂಕಿನ ಹಿಟ್ಟಿನಹಳ್ಳಿ ತಾಂಡಾದಲ್ಲಿರುವ ಗ್ರಾಮ ಪಂಚಾಯಿತಿ ಸಿಬ್ಬಂದಿ ಮನಬಂದಂತೆ ಮನೆಕರ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಹಿಟ್ಟಿನಹಳ್ಳಿ ತಾಂಡಾದಲ್ಲಿನ ಪಂಚಾಯಿತಿ ಕಾರ್ಯಾಲಯದ ಮುಂದೆ ಗುರುವಾರ ಪ್ರತಿಭಟನೆ ಕೈಗೊಂಡರು.
ಪ್ರತಿಭಟನಾಕಾರರು ಮಾತನಾಡಿ, ಪಂಚಾಯಿತಿ ಕಾರ್ಯದರ್ಶಿ ಮನ ಬಂದಂತೆ ವರ್ಷಕ್ಕೆ ಎರಡು ಬಾರಿ ಹೆಚ್ಚುವರಿ ದುಬಾರಿಯಾಗಿ ಮನೆಕರ ವಸೂಲಿ ಮಾಡುತ್ತಿದ್ದಾರೆ. ಜತೆಗೆ ಮನೆ ಖರೀದಿ ಸಮಯದಲ್ಲಿ ಸರ್ಕಾರ ನಿಗದಿಪಡಿಸಿದ 1200 ರೂ.ದರಕ್ಕಿಂತ ಹೆಚ್ಚಿನದಾಗಿ 5 ರಿಂದ 10 ಸಾವಿರ ರೂ. ಹಣ ಪಡೆಯುತ್ತಿದ್ದಾರೆ. ಈ ಬಗ್ಗೆ ಪಿಡಿಒ ಅವರಲ್ಲಿ ಕೇಳಬೇಕೆಂದರೆ ಅವರು ಸಹ ಪಂಚಾಯಿತಿಗೆ ಬರುತ್ತಿಲ್ಲ. ಹೀಗಾದರೆ ನಾವು ಯಾರನ್ನು ಕೇಳಬೇಕು ಎಂದು ಅಳಲು ತೋಡಿಕೊಂಡರು.
ಕೂಡಲೇ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಪಂಚಾಯಿತಿಗೆ ಭೇಟಿ ನೀಡಿ ವಿಚಾರಣೆ ಮಾಡುವ ಜತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅನೀಲ ರಾಠೋಡ, ಬಾಬು ರಾಠೋಡ, ಸಂತೋಷ ಚವ್ಹಾಣ, ಚಂದ್ರಕಾಂತ ಚವ್ಹಾಣ, ಆನಂದ ಮಾಂಜಿ, ವಿಲಾಸ್ ಚವ್ಹಾಣ, ಮಾದೇವ ಚವ್ಹಾಣ, ಶಾಂತಿಲಾಲ್ ಮಾಂಜಿ, ಭೀಮಸಿಂಗ್ ರಾಠೋಡ, ಸುನೀಲ ರಾಠೋಡ, ಕುಮಾರ ಚವ್ಹಾಣ, ಸಂತೋಷ ಚವ್ಹಾಣ, ಸಂಜು ರಾಠೋಡ, ಮಹೀಂದ್ರ ರಾಠೋಡ ಇದ್ದರು.