ಹಿಜಾಬ್​ಗೆ ಅವಕಾಶ ನೀಡಲು ಒತ್ತಾಯ

15-gdg-6
Published on

ಗದಗ: ಶಾಲಾ ಸಮವಸ್ತ್ರ ಹೊರತುಪಡಿಸಿ ಬೇರೆ ಯಾವುದೇ ಧಾರ್ವಿುಕ ಸಂಕೇತ ಧರಿಸಬಾರದು ಎಂದು ನ್ಯಾಯಾಲಯದ ಆದೇಶವಿದ್ದರೂ ನಗರದ ಉರ್ದು ಶಾಲೆ ನಂ.2ರಲ್ಲಿ ಮಕ್ಕಳು ಹಿಜಾಬ್ ಧರಿಸಿ ತರಗತಿಗೆ ಹಾಜರಾದ ಘಟನೆ ಮಂಗಳವಾರ ನಡೆಯಿತು.

‘ಹಿಜಾಬ್ ಧರಿಸಿ ಕ್ಲಾಸ್​ಗೆ ಹಾಜರಾಗಲು ಅವಕಾಶವಿಲ್ಲ ಎಂದು ಶಿಕ್ಷಕರು ತಿಳಿಸಿದ್ದಾರೆ. ನಮಗೆ ಹಿಜಾಬ್ ಧರಿಸಲು ಅವಕಾಶ ಕೊಡಿ, ಇಲ್ಲದಿದ್ದರೆ ಶಾಲೆಯನ್ನು ಮುಚ್ಚಿಬಿಡಿ. ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯಲ್ಲ’ ಎಂದು ಪಟ್ಟು ಹಿಡಿದರು. ಆಗ ಶಿಕ್ಷಕರು ವಿದ್ಯಾರ್ಥಿನಿಯರ ಮನವೊಲಿಸಲು ಮುಂದಾದರು. ಆದರೆ, ಏನೇ ಆದರೂ ಹಿಜಾಬ್ ತೆಗೆಯಲ್ಲ ಎಂದು ವಿದ್ಯಾರ್ಥಿನಿಯರು ಹೇಳಿದರು. ನಂತರ ವಿದ್ಯಾರ್ಥಿನಿಯರು ಶಾಲೆಯ ಗೇಟ್ ಬಳಿ ನಿಂತಿದ್ದ ಪೋಷಕರೊಂದಿಗೆ ಪ್ರತಿಭಟನೆ ನಡೆಸಿದರು. ಶಿಕ್ಷಕರು ಮಕ್ಕಳನ್ನು ಶಾಲೆಯಿಂದ ಹೊರ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಘಟನೆ ತಿಳಿಯುತ್ತಿದ್ದಂತೆಯೇ ಉರ್ದು ಶಾಲೆಗೆ ದೌಡಾಯಿಸಿದ ಡಿಡಿಪಿಐ ಬಸವಲಿಂಗಪ್ಪ ಅವರು ವಿದ್ಯಾರ್ಥಿನಿಯರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಡಿಡಿಪಿಐ ಮನವಿಗೂ ವಿದ್ಯಾರ್ಥಿನಿಯರು ಸೊಪ್ಪು ಹಾಕಲಿಲ್ಲ. ಹಿಜಾಬ್ ಧರಿಸಿಕೊಂಡೇ ಕ್ಲಾಸ್​ನಲ್ಲಿ ಕುಳಿತರು. ನಂತರ ವಿದ್ಯಾರ್ಥಿನಿಯರು ಸಮವಸ್ತ್ರದ ವೇಲ್ ಅನ್ನೇ ಹಿಜಾಬ್ ರೀತಿ ಧರಿಸಿದ ನಂತರ ಮೇಲೆ ತರಗತಿ ಮುಂದುವರಿಯಿತು ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಏನು ಮಾಡಬೇಕೆಂದು ತಿಳಿಯುತ್ತಿಲ್ಲ!: ಹಿಜಾಬ್ ಧರಿಸಿಕೊಂಡು ಶಾಲೆಗೆ ಬಂದರೆ ತರಗತಿಯಲ್ಲಿ ಕೂಡಲು ಅವಕಾಶವಿಲ್ಲ ಎಂದು ಸೂಚನೆ ನೀಡಲಾಗಿದೆ. ಶಿಕ್ಷಕರು, ಪೊಲೀಸರು ಹೇಳಿದರೂ ಕೆಲವು ವಿದ್ಯಾರ್ಥಿನಿಯರು ಹಠ ಬಿಡುತ್ತಿಲ್ಲ. ಅಧಿಕಾರಿಗಳ ಮನವಿಗೂ ಕಿಮ್ಮತ್ತು ನೀಡುತ್ತಿಲ್ಲ. ಏನು ಮಾಡಬೇಕೆಂದು ತಿಳಿಯದಾಗಿದೆ ಎಂದು ಡಿಡಿಪಿಐ ಬಸವಲಿಂಗಪ್ಪ ಅಳಲು ತೋಡಿಕೊಂಡರು. ಮಹಿಳೆಯೊಬ್ಬರು ಹಿಜಾಬ್ ಹಾಕಿಸಿ ವಿದ್ಯಾರ್ಥಿನಿಯರನ್ನು ಶಾಲೆಗೆ ಕರೆತಂದು ಬಿಟ್ಟುಹೋಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದ್ದು, ಮಹಿಳೆ ಯಾರು ಎಂಬುದು ತಿಳಿದಿಲ್ಲ. ಯಾರ ಮೇಲೆ ಕೇಸ್ ದಾಖಲಿಸಬೇಕು ಎಂದು ತಿಳಿಯುತ್ತಿಲ್ಲ. ಮಕ್ಕಳು ತರಗತಿಯಲ್ಲಿ ಹಾಕಿದ್ದು ಹಿಜಾಬ್ ಅಲ್ಲ. ಸಮವಸ್ತ್ರದ ವೇಲ್ ಧರಿಸಿದ್ದರು ಎಂದು ಅವರು ಸ್ಪಷ್ಟನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net