ಹಿಜಾಬ್ ಹೆಸರಲ್ಲಿ ರಾಜಕೀಯ ಮಾಡಲ್ಲ: ಸಚಿವ ಡಾ. ಕೆ.ಸುಧಾಕರ್ ಹೇಳಿಕೆ

11CBP 4
Published on

ಚಿಂತಾಮಣಿ: ಹಿಜಾಬ್ ವಿವಾದ ಮುಂದಿಟ್ಟುಕೊಂಡು ರಾಜಕೀಯ ಮಾಡುವ ಅವಶ್ಯಕತೆ ಬಿಜೆಪಿಗಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ಹೇಳಿದರು.ಹರಿಹರಪುರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮೊದಲಿನಿಂದಲೂ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಂದೇಶದೊಂದಿಗೆ ಅಭಿವೃದ್ಧಿ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ ಎಂದರು.

ಕೆಲವರು ಜನರ ದಿಕ್ಕು ತಪ್ಪಿಸಲು ಪಕ್ಷದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಟೀಕೆಗೂ ಮೊದಲು ವಾಸ್ತವ ಅರಿತುಕೊಳ್ಳಬೇಕು ಎಂದು ಪರೋಕ್ಷವಾಗಿ ಹಿಜಾಬ್ ವಿವಾದ ಬಿಜೆಪಿ ಸೃಷ್ಟಿ ಎಂಬ ಹೇಳಿಕೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಭಾರತವು ಮೊದಲಿನಿಂದಲೂ ವಿವಿಧತೆಯಲ್ಲಿ ಏಕತೆ ಹೊಂದಿದೆ. ಇಲ್ಲಿ ಎಲ್ಲರೂ ಐಕ್ಯತೆಯಿಂದ ಬದುಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಮಾರ್ಗದಲ್ಲಿ ಸಾಗಬೇಕು ಎಂದರು.ಇತರರ ಭಾವನೆಗಳಿಗೆ ಧಕ್ಕೆ ತರುವುದು ಭಾರತೀಯ ಸಂಸ್ಕೃತಿಯಲ್ಲ. ಎಲ್ಲರಿಗೂ ಗೌರವ ಕೊಡಬೇಕೇ ಹೊರತು ಯಾರೇ ಆಗಲಿ ಘಾಸಿ ಉಂಟು ಮಾಡಬಾರದು.

ಶಾಲೆಯಲ್ಲಿ ಶ್ರೀಮಂತ ಮತ್ತು ಬಡವ ಎನ್ನುವ ಭೇದವಿಲ್ಲ. ಸಮಾನತೆಯ ಪ್ರತೀಕವಾದ ಸಮವಸ್ತ್ರ ಸಂಹಿತೆಯನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಪರಸ್ಪರ ಏಕತೆಯ ಭಾವನೆಯಲ್ಲಿ ಶಿಕ್ಷಣ ಪಡೆಯಬೇಕು. ಪ್ರಸ್ತುತ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ತೀರ್ಪು ಹೊರ ಬರುವವರೆಗೂ ಕಾಯಬೇಕು. ಹಾಗೆಯೇ ಆದೇಶದಂತೆ ನಡೆದುಕೊಳ್ಳಬೇಕು ಎಂದರು.

ಜಲ ಜೀವನ್ ತ್ವರಿತ ಅನುಷ್ಠಾನ: 75 ವರ್ಷಗಳಾದರೂ ಅನೇಕ ಗ್ರಾಮಗಳಲ್ಲಿ ಜನರು ಕೆರೆ, ಬಾವಿಗಳಿಗೆ ಹೋಗಿ ಕುಡಿಯುವ ನೀರು ತರಬೇಕಾದ ಪರಿಸ್ಥಿತಿ ಇದೆ. ಇದು ನಾಚಿಕೆ ವಿಚಾರ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮನೆ ಮನೆಗೂ ಕೊಳಾಯಿ ಮೂಲಕ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆ ಘೋಷಿಸಿದ್ದಾರೆ. ಇದರಡಿ ಯದಾರ‌್ಲಹಳ್ಳಿ ಕೆರೆಯಿಂದ 14 ಗ್ರಾಮಗಳಿಗೆ ನೀರು ಪೂರೈಸಲು ಸರ್ಕಾರದ ಮೇಲೆ ಒತ್ತಡ ಹೇರಿದ್ದು, ಕ್ರಿಯಾಯೋಜನೆಗೆ ಅನುಮೋದನೆ ಸಿಕ್ಕಿದೆ. ತ್ವರಿತವಾಗಿ ನೀರು ಪೂರೈಸಲಾಗುತ್ತದೆ. ಹಾಗೆಯೇ ದಂಡಿಗಾನಹಳ್ಳಿಯ ಕೆರೆಯಿಂದ 63 ಗ್ರಾಮಗಳಿಗೆ ನೀರು ಪೂರೈಸುವ 53 ಕೋಟಿ ರೂ. ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಲಿದೆ ಎಂದು ಸಚಿವರು ತಿಳಿಸಿದರು.

ಆಲಯದ ಉದ್ಘಾಟನೆ: ತಾಲೂಕಿನ ಹರಿಹರಪುರದಲ್ಲಿ ನಿರ್ಮಿಸಲಾಗಿರುವ ಅಚಲ ಶ್ರೀಸದ್ಗುರು ಗಗನಾನಂದದಾರ್ಯ ಧ್ಯಾನ ಮಂದಿರ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇವರಿಗೆ ವಿಶೇಷ ಅಭಿಷೇಕ ಮತ್ತು ಅಲಂಕಾರ ಮಾಡಲಾಗಿತ್ತು. ಸಚಿವ ಡಾ ಕೆ.ಸುಧಾಕರ್ ಸೇರಿ ಗ್ರಾಮದ ಸುತ್ತಲಿನ ಜನರು ಆಗಮಿಸಿ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net