ಹಿಜಾಬ್ ವಿಷಯದಲ್ಲಿ ರಾಜಕೀಯ ಮಾಡಲ್ಲ

12Manju6
ಬೆಳಗಾವಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿದರು. ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ರಾಜು ಸೇಠ್, ವೀರಕುಮಾರ ಪಾಟೀಲ ಇತರರು ಇದ್ದರು.
Published on

ಬೆಳಗಾವಿ: ಹಿಜಾಬ್ ವಿಷಯದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ನಮಗಿಲ್ಲ. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತೇವೆ ವಿನಃ ರಾಜಕೀಯ ಮಾಡುವುದಕ್ಕಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.

ಬೆಳಗಾವಿ ನಗರದ ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ, ಎಬಿವಿಪಿ ವಿದ್ಯಾರ್ಥಿ ಸಂಘಟನೆಯು ರಾಷ್ಟ್ರಧ್ವಜ ಬದಲಾಗಿ ಕೇಸರಿ ಧ್ವಜ ಹಾರಿಸುವ ಮೂಲಕ ವಿವಾದ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಎಬಿವಿಪಿ ಸಂಘಟನೆ ಯಾರದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಇಷ್ಟೆಲ್ಲ ವಿವಾದಕ್ಕೆ ಆ ಸಂಘಟನೆಯೇ ಪ್ರಮುಖ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಪಕ್ಷದ ನಾಯಕ ರಾಹುಲ ಗಾಂಧಿ ಅವರ ನಿರ್ದೇಶನದಂತೆ ನಾವು, ನಮ್ಮ ನಾಯಕರು ನಡೆಯುತ್ತಿದ್ದೇವೆ. ಮಕ್ಕಳ ಭವಿಷ್ಯ ರೂಪಿಸುವ ಶಾಲಾ-ಕಾಲೇಜುಗಳಲ್ಲಿ ಯಾರೂ ರಾಜಕೀಯ ಮಾಡಬಾರದು. ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜ ಬದಲಾಗಿ ಕೇಸರಿ ಧ್ವಜ ಹಾರಿಸುತ್ತೇವೆೆ ಎಂದು ಹೇಳಿಕೆ ನೀಡುವವರ ವಿರುದ್ಧ ರಾಜ್ಯಪಾಲರು, ಮುಖ್ಯಮಂತ್ರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಂಬರುವ ಬಜೆಟ್ ಅಧಿವೇಶನದಲ್ಲಿ ಎಪಿಎಂಸಿ ಕಾಯ್ದೆ , ಖಾಸಗಿ ಮಾರುಕಟ್ಟೆಗಳ ರದ್ದು ಮಾಡುವ ಕುರಿತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಸದನದಲ್ಲಿ ಹೋರಾಟ ನಡೆಸುತ್ತೇವೆ. ಬೆಳಗಾವಿಯಲ್ಲಿ ಖಾಸಗಿ ಮಾರುಕಟ್ಟೆ ಆರಂಭಿಸುತ್ತೇವೆ ಎಂದು ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಂದಲೇ ಆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಆಡಳಿತ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಾಂಗ್ರೆಸ್ ಸದಸ್ಯತ್ವ ಪಡೆದುಕೊಳ್ಳಲು ಜನರು ಮುಂದೆ ಬರುತ್ತಿದ್ದಾರೆ. ಹಣ ಖರ್ಚು ಮಾಡದೆ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ.| ಡಿ.ಕೆ.ಶಿವಕುಮಾರ, ಕೆಪಿಸಿಸಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net