ಹಿಜಾಬ್ ಧರಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ

8-gdg-1a
Published on

ಗದಗ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನಲ್ಲಿ ಮಂಗಳವಾರ ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಮುಂದಾದ ವಿದ್ಯಾರ್ಥಿನಿಯರಿಗೆ ಕಾಲೇಜ್ ಆಡಳಿತ ಮಂಡಳಿಯವರು ಹಾಗೂ ಪೊಲೀಸರು ಪ್ರವೇಶ ನಿರಾಕರಿಸಿದ್ದರಿಂದ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ಮಧ್ಯೆ ಕೆಲಕಾಲ ವಾಗ್ವಾದ ನಡೆಯಿತು.

ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರು ಪ್ರಾಚಾರ್ಯರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಹೀಗಾಗಿ ಕಾಲೇಜ್​ಗೆ ದಿಢೀರನೆ ರಜೆ ಘೋಷಿಸಲಾಯಿತು. ಇದಕ್ಕೂ ಮೊದಲು ಕಾಲೇಜ್​ಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ತಿಳಿವಳಿಕೆ ನೀಡಲಾಯಿತು. ಕ್ಲಾಸ್ ರೂಂ ಪ್ರವೇಶಿಸುವಾಗ ಹಿಜಾಬ್ ತೆಗೆದಿಟ್ಟು ಬನ್ನಿ, ಕ್ಲಾಸ್ ಮುಗಿದ ನಂತರ ಮತ್ತೆ ಧರಿಸಿಕೊಂಡು ಮನೆಗೆ ಹೋಗಿ ಎಂದು ತಿಳಿಸಲಾಯಿತು. ಆದರೆ, ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಡಲು ಸುತಾರಾಂ ಒಪ್ಪಲಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು.

ವಿದ್ಯಾರ್ಥಿನಿಯರು ಪ್ರಾಚಾರ್ಯ ಪ್ರಕಾಶ ಹೊಸಮನಿ ಅವರೊಂದಿಗೆ ವಾಗ್ವಾದ ನಡೆಸಿದರು. ‘ಕಾಲೇಜ್ ಪ್ರವೇಶ ಪಡೆಯುವಾಗ ಹಿಜಾಬ್ ಧರಿಸಬಾರದು ಎಂದು ಹೇಳಿಲ್ಲ. ಅಂದು ಹಾಗೆ ಹೇಳಿದ್ರೆ ನಾವು ಕಾಲೇಜ್​ಗೆ ಪ್ರವೇಶವನ್ನೇ ಪಡೆಯುತ್ತಿರಲಿಲ್ಲ. ಇಷ್ಟು ದಿನ ಬಿಟ್ಟು ಇದೀಗ ಯಾಕೆ ಹಿಜಾಬ್ ಧರಿಸಬಾರದು ಎಂದು ಹೇಳುತ್ತಿದ್ದೀರಿ?’ ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಪ್ರಾಚಾರ್ಯರು, ಸರ್ಕಾರದ ಆದೇಶ ಪಾಲಿಸಬೇಕು. ಸಮವಸ್ತ್ರ ಧರಿಸಿ ಕಾಲೇಜ್​ಗೆ ಆಗಮಿಸಬೇಕು ಎಂದು ಸಲಹೆ ನೀಡಿದರು. ಇದನ್ನು ವಿರೋಧಿಸಿ ವಿದ್ಯಾರ್ಥಿನಿಯರು ಕಾಲೇಜ್ ಆವರಣದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿನಿಯರ ಪಟ್ಟು

ಫೆ. 21ಕ್ಕೆ ಪರೀಕ್ಷೆಗಳಿದ್ದು, ತರಗತಿ ಪ್ರವೇಶಿಸಲು ನಿರಾಕರಿಸಿದರೆ ಪರೀಕ್ಷೆ ಹೇಗೆ ಬರೆಯಬೇಕು. ಹಿಜಾಬ್ ಬುರ್ಕಾ ಧರಿಸಿ ಬರುವುದು ಇಂದು ನಿನ್ನೆಯದಲ್ಲ. ಯಾವುದೇ ಕಾರಣಕ್ಕೂ ಹಿಜಾಬ್ ಇಲ್ಲದೇ ನಾವು ಕಾಲೇಜ್​ಗೆ ಬರಲ್ಲ. ಹಿಜಾಬ್ ಧರಿಸಿಯೇ ಬರುತ್ತೇವೆ ಎಂದು ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಹೇಳಿದರು.

ಹಿಜಾಬ್ ಅಥವಾ ಕೇಸರಿ ಶಾಲು ಹಾಕಿಕೊಂಡು ಬರುವಂತಹ ವಿದ್ಯಾರ್ಥಿಗಳಿಗೆ ತರಗತಿಗೆ ಪ್ರವೇಶವಿಲ್ಲ. ಈ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಲಾಗಿದೆ. ಹಿಜಾಬ್ ಹಾಕಿಕೊಂಡು ಬರುವಂಥವರಿಗೆ ಮೊದಲು ತಿಳಿವಳಿಕೆ ನೀಡಲಾಯಿತು. ಆದರೆ, ಇದಕ್ಕೆ ಒಪ್ಪದೇ ಪ್ರತಿಭಟನೆ ಆರಂಭಿಸಿದರು. ಹೀಗಾಗಿ ಕಾಲೇಜ್​ಗೆ ರಜೆ ಘೋಷಿಸಲಾಯಿತು. ಸರ್ಕಾರದ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯ.

| ಪ್ರಕಾಶ ಹೊಸಮನಿ, ಪ್ರಾಚಾರ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net