ಹಿಜಾಬ್ ಧರಿಸಿ ಪಾಠ ಕೇಳಲು ವಿದ್ಯಾರ್ಥಿನಿಯರ ಪಟ್ಟು : ಕೋರ್ಟ್ ಆದೇಶಕ್ಕೆ ಬದ್ಧ ಎಂದ ಕಾಲೇಜು ಆಡಳಿತ

1
Published on

ರಾಮನಗರ: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬುಧವಾರದಿಂದ ಆರಂಭಗೊಂಡ ಜಿಲ್ಲೆಯ ಪಿಯುಸಿ ಮತ್ತು ಪದವಿ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಮತ್ತೆ ಆತಂಕ ಸೃಷ್ಟಿಸಿತ್ತು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಯಲ್ಲಿ ಕೂರಲು ಅವಕಾಶ ನೀಡುತ್ತಿಲ್ಲ ಎಂದು ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಪೊಲೀಸರು ಹಾಗೂ ವಿದ್ಯಾರ್ಥಿನಿಯರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

ಬುಧವಾರ ಪುನರಾರಂಭಗೊಂಡ ಕಾಲೇಜಿಗೆ ಹಿಜಾಬ್ ಧರಿಸಿಯೇ ತೆರಳಿದ್ದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಲ್ಲಿ ಹಲವರು ತರಗತಿಯಲ್ಲಿ ಹಿಜಾಬ್ ಧರಿಸಿ ಕೂರಲು ಅವಕಾಶ ನೀಡುವಂತೆ ಕೋರಿದ್ದಾರೆ ಎನ್ನಲಾಗಿದೆ. ಆದರೆ, ಕಾಲೇಜು ಸಿಬ್ಬಂದಿ ಇದಕ್ಕೆ ಅವಕಾಶ ನೀಡದೆ, ಎಂದಿನಂತೆ ತರಗತಿಯಲ್ಲಿ ಕುಳಿತು ಪಾಠ ಕೇಳುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕೊಠಡಿಗೆ ತೆರಳುತ್ತೇವೆಂದು ಹಠ ಹಿಡಿದಿದ್ದಾರೆ. ಇದಕ್ಕೆ ಸಿಬ್ಬಂದಿ ಅವಕಾಶ ನೀಡದ್ದರಿಂದ ಕಾಲೇಜಿನ ಮುಖ್ಯದ್ವಾರಕ್ಕೆ ಬಂದು ಘೋಷಣೆ ಕೂಗಿದ್ದಾರೆ. ಅಷ್ಟರಲ್ಲಾಗಲೆ ಕಾಲೇಜು ಮುಂದೆ ಜಮಾಯಿಸಿದ ವಿದ್ಯಾರ್ಥಿನಿಯರ ಪಾಲಕರು ಕಾಲೇಜಿನ ಒಳಗೆ ಹೋಗಲು ಮುಂದಾಗಿದ್ದಾರೆ. ಆದರೆ ಪೊಲೀಸರು ಅವಕಾಶ ನೀಡಲಿಲ್ಲ. ಈ ವೇಳೆ ಪೊಲೀಸರು ಹಾಗೂ ಪಾಲಕರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.

ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಿಸಲಾಗಿದೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್, ಜೆಡಿಎಸ್ ಕೆಲ ಮುಖಂಡರು ವಿದ್ಯಾರ್ಥಿನಿಯರ ಪಾಲಕರೊಂದಿಗೆ ಮಾತುಕತೆ ನಡೆಸುತ್ತಿದ್ದ ದೃಶ್ಯಗಳೂ ಕಂಡು ಬಂದವು.

ಆಕ್ರೋಶ: ಇನ್ನು ಕೆಲವು ಪಕ್ಷಗಳ ಮುಖಂಡರು ವಿದ್ಯಾರ್ಥಿನಿಯರೊಂದಿಗೆ ಕಾಲೇಜು ಆವರಣಕ್ಕೆ ತೆರಳಿದ್ದು ಆಕ್ರೋಶಕ್ಕೆ ಕಾರಣವಾಯಿತು. ಕಾಲೇಜು ಕಾಂಪೌಂಡ್ ಮತ್ತು ಮುಖ್ಯದ್ವಾರದಿಂದ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದರ ಹೊರತಾಗಿಯೂ ಗುಂಪು ಸೇರಲು ಅವಕಾಶ ಮಾಡಿಕೊಡಲಾಗಿದೆ, ಕೆಲವರು ಕಾಲೇಜು ಕ್ಯಾಂಪಸ್‌ಗೆ ತೆರಳಿದ್ದಾರೆ ಎಂದು ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಒಪ್ಪಲೇ ಇಲ್ಲ: ಹಿಜಾಬ್ ಧರಿಸಿ ತರಗತಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಿಲ್ಲ ಎನ್ನುವ ಕಾರಣಕ್ಕೆ ಕಾಲೇಜಿನಿಂದ ಹೊರ ಬಂದಿದ್ದ ವಿದ್ಯಾರ್ಥಿನಿಯರು ಮತ್ತೆ ಕಾಲೇಜು ಆಡಳಿತ ಮಂಡಳಿಯೊಂದಿಗೆ ಮಾತುಕತೆಗೆ ತೆರಳಿದರು. ಈ ವೇಳೆ ವಿದ್ಯಾರ್ಥಿನಿಯರ ಮನವೊಲಿಸುವ ಹಾಗೂ ಹೈಕೋರ್ಟ್ ಆದೇಶ ಪಾಲನೆ ಬಗ್ಗೆ ಪ್ರಾಂಶುಪಾಲ ವಿ.ಎಚ್. ರಾಜಶೇಖರ್, ಉಪವಿಭಾಗಧಿಕಾರಿ ಮಂಜುನಾಥ್, ತಹಸೀಲ್ದಾರ್ ವಿಜಯಕುಮಾರ್ ಪ್ರಯತ್ನಿಸಿದರು. ಆದರೆ ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಪಟ್ಟು ಹಿಡಿದರು. ಕಾಲೇಜು ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಬೇಡಿಕೆಯನ್ನು ನಿರಾಕರಿಸಿದರು.

ಮಾಗಡಿ ಮತ್ತು ರಾಮನಗರದಲ್ಲಿ ಮಾತಿನ ಚಕಮಕಿಯಂತಹ ಘಟನೆಗಳು ನಡೆದಿವೆ. ಹೈಕೋರ್ಟ್ ಆದೇಶ ಪಾಲಿಸಬೇಕು. ಈ ಬಗ್ಗೆ ಪ್ರಾಂಶುಪಾಲರು ಕ್ರಮ ಕೈಗೊಳ್ಳುತ್ತಾರೆ. ಇಲಾಖೆಯಿಂದ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕೆ.ಸಂತೋಷ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net