ಹಿಜಾಬ್- ಕೇಸರಿ ಶಾಲು ಸಂಘರ್ಷ : ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್

2
Published on

ರಾಮನಗರ: ಹಿಜಾಬ್- ಕೇಸರಿ ಶಾಲು ಸಂಘರ್ಷದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಈ ನಡುವೆ ಜಿಲ್ಲೆಗೂ ಈ ಸಂಘರ್ಷ ಕಾಲಿಡುವ ಲಕ್ಷಣ ಗೋಚರಿಸಿದ್ದು, ಈ ಹಿನ್ನೆಲೆಯಲ್ಲಿ ರಾಮನಗರ ಸೇರಿ ಹಲವೆಡೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಬಿಕೋ ಎನ್ನುತ್ತಿದ್ದ ಸಂಸ್ಥೆಗಳು: ಸರ್ಕಾರ ರಜೆ ಘೋಷಣೆ ಮಾಡಿದ್ದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ಪ್ರೌಢಾಶಾಲೆಯಲ್ಲಿ 8ನೇ ತರಗತಿ ನಡೆಸಲು ಮಾತ್ರ ಅವಕಾಶ ನೀಡಲಾಗಿತ್ತು. ಉಳಿದಂತೆ ಶಾಲೆಗಳಿಗೆ ವಿದ್ಯಾರ್ಥಿಗಳಿಗೆ ರಜೆ ಇದ್ದರೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಾಗಬೇಕಿತ್ತು. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಇರಲಿಲ್ಲ.

ಬಂದೋಬಸ್ತ್: ಕೇಸರಿ ಹಾಗೂ ಹಿಜಾಬ್ ಕಿಚ್ಚು ಜಿಲ್ಲೆಯಲ್ಲಿ ವ್ಯಾಪಿಸದಂತೆ ತಡೆಯುವ ಸಲುವಾಗಿ ಜಿಲ್ಲಾ ಪೊಲೀಸ್ ಇಲಾಖೆಯು ಬುಧವಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸೂಕ್ಷ್ಮ ಪ್ರದೇಶ ಸೇರಿದಂತೆ ಪ್ರಥಮ ದರ್ಜೆ ಕಾಲೇಜುಗಳ ಬಳಿ ಪೊಲೀಸ್ ಮೀಸಲು ಪಡೆಯನ್ನು ನಿಯೋಜನೆ ಮಾಡಿತ್ತು. ವಿವಾದ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹಾಗೂ ಎಲ್ಲವೂ ಸರಿಯಾಗಿದೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲು, ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿಗಳಂತೆ ಕಾಲೇಜು ಅವರಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಬಿದ್ದ ಕಡೆಗಳಲ್ಲಿ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ.

ಎದಿರೇಟು: ರಾಮನಗರ ಜಿಲ್ಲೆಯಲ್ಲಿ ಕೇಸರಿ ಮತ್ತು ಹಿಜಾಬ್ ವಿವಾದ ಅಂಟಿರಲಿಲ್ಲ. ಆದರೆ ಮಂಗಳವಾರ ಮುಸ್ಲಿಂ ಯುವತಿಯರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎನ್ನುವ ಬೇಡಿಕೆಯನ್ನು ಇಟ್ಟಿದ್ದರು. ಇದರಿಂದ ಕೆರಳಿದ ಹಿಂದುಪರ ಸಂಘಟನೆಗಳು ಬುಧವಾರದಿಂದ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿಸಿ ಕಳುಹಿಸುವ ತೀರ್ಮಾನ ತೆಗೆದುಕೊಂಡಿತ್ತು. ಆದರೆ, ಬುಧವಾರ ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಕಾರಣದಿಂದ ಇದಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net