ಹಿಂಸೆ, ದ್ರೋಹ ವಿರೋಧಿ ಪ್ರಜ್ಞೆ ಇರಲಿ

pejavar shri
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಯಾರಿಗೂ ಹಿಂಸೆ, ದ್ರೋಹ ಆಗದಂತೆ ಬದುಕು ನಡೆಸುವುದೇ ನಿಜವಾದ ದೈವಭಕ್ತಿ. ಆದ್ದರಿಂದ ಪ್ರತಿಯೊಬ್ಬರಲ್ಲೂ ಹಿಂಸೆ, ದ್ರೋಹ ವಿರೋಧಿ ಪ್ರಜ್ಞೆ ಇರಬೇಕು ಎಂದು ಉಡುಪಿ ಪೇಜಾವರ ಅಧೋಕ್ಷಜ ಪೀಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಕರೆ ನೀಡಿದರು.

ಪೇಜಾವರ ಪೀಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಪಂಚಮ ಪಾದುಕಾ ಆರಾಧನಾ ಮಹೋತ್ಸವ ನಿಮಿತ್ತ ಹುಬ್ಬಳ್ಳಿಯ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಸೋಮವಾರ ಅನುಗ್ರಹ ಸಂದೇಶ ನೀಡಿದ ಶ್ರೀಗಳು ನಮ್ಮಿಂದ ಯಾರಿಗೂ ಹಿಂಸೆ ಆಗಬಾರದು. ಹಿಂಸೆ ಆಗದಂತೆಯೂ ತಡೆಯಬೇಕು ಎಂದರು.

ಅಹಿಂಸೆ, ದಯೆ, ಕರುಣೆ ಎಂಬ ಭಾವ ಪುಷ್ಪಗಳು ನಮ್ಮ ಹೃದಯದಲ್ಲಿ ಹುಟ್ಟಬೇಕು. ಹಣ ಕೊಟ್ಟು ಈ ಪುಷ್ಪಗಳನ್ನು ಖರೀದಿಸಲು ಸಾಧ್ಯವಿಲ್ಲ. ಇಂತಹ ಭಾವಪುಷ್ಪಗಳಿಂದ ಪೂಜೆ ಮಾಡಿದರೆ ದೇವರು ಸಂತುಷ್ಟನಾಗುತ್ತಾನೆ. ನಮ್ಮ ಉಸಿರು, ಬದುಕು ಹೇಗೆ ಬೇರೆ ಬೇರೆ ಅಲ್ಲವೋ, ಅದೇ ರೀತಿ ಬದುಕು ಮತ್ತು ಭಗವಂತನ ಆರಾಧನೆ ಬೇರೆ ಬೇರೆ ಆಗಬಾರದು.

ಮನುಷ್ಯನ ಬದುಕಿನ ಯಾವ ನಡೆಯೂ ಭಗವಂತ ಹಾಗೂ ಸಂವಿಧಾನ ವಿರೋಧಿ ಆಗಬಾರದು. ಭಗವಂತನ ಮಾರ್ಗದರ್ಶನಕ್ಕೆ ವಿರುದ್ಧವಾಗಿ ನಡೆಯುವವನು ದೈವಭಕ್ತ ಆಗಲಾರ. ಸಂವಿಧಾನ ವಿರೋಧಿಯಾಗಿದ್ದರೆ ದೇಶ ಭಕ್ತ ಆಗಲಾರ. ಸಂವಿಧಾನವನ್ನು ಗೌರವಿಸಿ ಯಾರು ಬದುಕು ನಡೆಸುತ್ತಾರೋ ಅವರು ನಿಜವಾದ ದೇಶಭಕ್ತರು ಎಂದು ಹೇಳಿದರು.

ಜೀವನದಲ್ಲಿ ಯಶಸ್ಸು ಗಳಿಸಲು ಭಗವಂತನ ಅನುಗ್ರಹ ಬೇಕು. ದೇವರ ಅನುಗ್ರಹಕ್ಕೆ ಪಾತ್ರರಾಗಲು ನಿತ್ಯ ಎಷ್ಟು ಗಂಟೆ ಪೂಜೆ ಮಾಡಬೇಕು ? ದಿನದ 24 ಗಂಟೆ ಭಗವಂತನ ಅನುಗ್ರಹ ಸಂಪಾದಿಸಲು 24 ಗಂಟೆ ಪೂಜೆ, ಆರಾಧನೆ ಮಾಡಲು ಸಾಧ್ಯವಿಲ್ಲ. ನಿಮ್ಮ ಪಾಲಿನ ಕರ್ತವ್ಯದ ವೇಳೆ ಹರಿ ಸ್ಮರಣೆ ಮಾಡಿ. ದೇವರ ಪೂಜೆ ಎಂಬುದು ಒಂದು ಕೆಲಸದಂತೆ ಆಗಬಾರದು ಎಂದು ಉಪದೇಶಿಸಿದರು.

ಪೇಜಾವರ ಶ್ರೀಗಳ ಪಾದ ಪೂಜೆ, ಸಂಸ್ಥಾನ ಪೂಜೆ ಕಾರ್ಯಕ್ರಮಗಳು ನೆರವೇರಿದವು. ಭಕ್ತರಿಗೆ ಫಲಮಂತ್ರಾಕ್ಷತೆ ವಿತರಿಸಲಾಯಿತು. ಡಾ. ಸತ್ಯಮೂರ್ತಿ ಆಚಾರ್, ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ, ಗೋಪಾಲ ಕುಲಕರ್ಣಿ, ಗೋವಿಂದ ಮೈಸೂರು, ಗುರುರಾಜ ಬಾಗಲಕೋಟೆ, ಶ್ರೀಕಾಂತ ಕೆಮ್ತೂರ, ಎ.ಸಿ.ಗೋಪಾಲ್, ಅಶ್ವಿನಿ ಬ್ಯಾಡಗಿ, ಕೆ.ಎನ್. ಪುರೋಹಿತ, ಮನೋಹರ ಪರ್ವತಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net