

ಮೈಸೂರು: ಆಕ್ರೋಶದ ಕೈಗೆ ಬುದ್ಧಿಕೊಟ್ಟು ಅನರ್ಥಕ್ಕೆ ಅವಕಾಶ ನೀಡದೆ ಶಾಂತಿ ಕಾಪಾಡುವಂತೆ ಮಣಿಪುರ ಜನತೆಯಲ್ಲಿ ಮನವಿ ಮಾಡಿದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಅವಶ್ಯವಿದ್ದರೆ ಸಂಧಾನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಇರುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ಚಾರ್ತುಮಾಸ್ಯ ಕೈಗೊಂಡಿರುವ ಶ್ರೀಗಳು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ದೇಶದ ಅವಿಭಾಜ್ಯ ಅಂಗವಾಗಿರುವ ಮಣಿಪುರದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಬೆಳವಣಿಗೆಗಳಿಂದ ಮನಸ್ಸಿಗೆ ತುಂಬ ವಿಷಾದವಾಗಿದೆ. ಜಗತ್ತಿಗೆ ಅಹಿಂಸೆ, ಶಾಂತಿ ಮಂತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಬೋಧಿಸಿದ ಭಾರತದ ಯಾವುದೇ ಭಾಗದಲ್ಲಿ ಇಂಥ ವಿಲಕ್ಷಣ ಬೆಳವಣಿಗೆಗಳು ನಡೆಯಬಾರದು. ಇದು ನಮಗೆ ಬದುಕು ಕೊಟ್ಟ ನೆಲಕ್ಕೆ ನಾವು ಮಾಡುವ ಅವಮಾನವಾಗುತ್ತದೆ ಎಂದಿದ್ದಾರೆ.
ಪ್ರಪಂಚದ ಸಮಗ್ರ ಇತಿಹಾಸವನ್ನು ಗಮನಿಸಿದರೆ ಹಿಂಸೆ, ಆಕ್ರಮಣ, ಅತ್ಯಾಚಾರಗಳಿಂದ ಯಾರೂ, ಯಾವ ದೇಶವೂ ಏನನ್ನೂ ಸಾಧಿಸಿಲ್ಲ. ರಾಮಾಯಣ, ಮಹಾಭಾರತಗಳೂ ಇದನ್ನು ಸಾರಿ ಹೇಳಿವೆ. ಮಣಿಪುರದ ನೆಲದಲ್ಲಿ ಅನಾದಿ ಕಾಲದಿಂದ ಬದುಕುತ್ತಿರುವ ಎರಡು ಸಮುದಾಯಗಳ ನಡುವೆ ಯಾವುದೋ ಅಭಿಪ್ರಾಯ, ಭೇದಗಳಿಂದ ಹುಟ್ಟಿಕೊಂಡ ಈ ಗಲಭೆಗಳಿಂದ ಏನನ್ನು ಸಾಧಿಸಲು ಹೊರಟಿದ್ದೇವೆ?. ನಮ್ಮ ಮುಂದಿನ ಪೀಳಿಗೆಗೆ ಯಾವ ಸಂದೇಶವನ್ನು ಕೊಡಲು ಹೊರಟಿದ್ದೇವೆ ಎನ್ನುವುದನ್ನು ಯೋಚಿಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಈ ಬೆಳವಣಿಗೆಗಳು ಮುಂದೆ ಮತ್ತಷ್ಟು ಅನರ್ಥಕಾರಿ ಬೆಳವಣಿಗೆಗಳಿಗೆ ದಾರಿಯಾದೀತು. ಅದೆಲ್ಲಕ್ಕಿಂತ ಹೆಚ್ಚಾಗಿ ಎರಡು ಸಮುದಾಯಗಳ ನಡುವಿನ ಜಗಳದ ಲಾಭವನ್ನು ಪಡೆಯಲು ಮತ್ಯಾರೋ ಹವಣಿಸಬಹುದು. ಆದ್ದರಿಂದ ಮಣಿಪುರದ ಜನತೆ ತಕ್ಷಣ ಹಿಂಸೆಯ ಮಾರ್ಗವನ್ನು ಬಿಟ್ಟು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಸಮಾಲೋಚಿಸಿ ಬಗೆಹರಿಸಿಕೊಳ್ಳಬೇಕು. ಮಣಿಪುರ ಮತ್ತು ದೇಶದ ಭವ್ಯ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಸಂದೇಶವನ್ನು ಕೊಡಬೇಕು ಎಂದು ಕೋರಿದ್ದಾರೆ.
ಮಣಿಪುರದ ಶಾಂತಿ, ಪ್ರಗತಿಗೆ ಮಾರಕವಾಗಿರುವ ಇಂಥ ಅಹಿತಕರ ಬೆಳವಣಿಗೆಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಎಲ್ಲರೂ ಒಟ್ಟಾಗಿ ಶಪಥ ಮಾಡಬೇಕು. ನಮ್ಮ ಒಗ್ಗಟ್ಟು ನಮ್ಮ ಶಕ್ತಿ, ನಮ್ಮ ವಿಘಟನೆ ಮತ್ತೊಬ್ಬನ ಶಕ್ತಿಯಾಗುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು. ಅವಶ್ಯವಿದ್ದರೆ ಮಣಿಪುರದ ಒಳಿತಿಗಾಗಿ ಯಾವುದೇ ಸಂಧಾನ ಮಾತುಕತೆಗಳಿಗೂ ಮಧ್ಯಸ್ಥಿಕೆ ವಹಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.