ಹಿಂದೂರಾಷ್ಟ್ರ ಸಂವಿಧಾನ ಮಂಡಿಸುವವರನ್ನು ಬಂಧಿಸಿ

IMG-20250202-WA0019
Published on

ಚಾಮರಾಜನಗರ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಫೆ.3 ರಂದು ಮನುಸ್ಮತಿ ಆಧಾರಿತ ಪ್ರತ್ಯೇಕ ಸಂವಿಧಾನವನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಸಿದ್ಧತೆ ಮಾಡಿಕೊಂಡಿರುವ ಸನಾತನವಾದಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಯರಿಯೂರು ರಾಜಣ್ಣ ಒತ್ತಾಯಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಪಕ್ಷದವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ದೇಶದ ಐಕ್ಯತೆಗೆ ದಕ್ಕೆ ತರುವಂತಹ ವಿಚಾರಗಳು ನಡೆಯುತ್ತಿದೆ. ಮನುಸ್ಮತಿ ಆಧಾರಿತ 501 ಪುಟಗಳ ಸಂವಿಧಾನವನ್ನು ಫೆ.3 ರಂದು ಕೇಂದ್ರ ಸರ್ಕಾರಕ್ಕೆ ನೀಡುವುದಾಗಿ ಹೇಳಿಕೆ ನೀಡಿರುವ ಸಾಧು-ಸಂತರನ್ನು ದೇಶ ದ್ರೋಹ ಪ್ರಕರಣದ ಅಡಿಯಲ್ಲಿ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಈ ದೇಶದ ಘನತೆಗೆ ದಕ್ಕೆ ತರುವ ಕೆಲಸವನ್ನು ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿದೆ. ಸಂಘಪರಿವಾರ ಮತ್ತು ಬಿಜೆಪಿ ಒಂದಾಗಿ ದೇಶದ ಸಂವಿಧಾನಕ್ಕೆ ಕುತ್ತು ತರುವ ಕೆಲಸವನ್ನು ಮಾಡುತ್ತಿವೆ. ಸಂವಿಧಾನದ ಅಡಿಯಲ್ಲಿ ಆಯ್ಕೆಯಾಗಿರುವ ಪ್ರತಿಯೊಬ್ಬ ಜನಪ್ರತಿನಿಧಿಯೂ ಇದನ್ನು ಖಂಡಿಸಬೇಕು. ಫೆ.3 ರಂದು ಮಹಾಕುಂಭ ಮೇಳದಲ್ಲಿ ನೀಡಲಿರುವ 501 ಪುಟಗಳ ಹಿಂದೂರಾಷ್ಟ್ರ ಸಂವಿಧಾನವನ್ನು ಕೇಂದ್ರ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್ ರಚನೆಯ ಸುಭದ್ರ ಸಂವಿಧಾನಕ್ಕೆ ದಕ್ಕೆ ಆಗದಂತೆ ನೋಡಿಕೊಳ್ಳಬೇಕು. ಇಲ್ಲವಾದರೇ ದೇಶದಾದ್ಯಂತ ಯುದ್ಧ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಡಿಎಸ್‌ಎಸ್ ಸಂಘಟನಾ ಸಂಚಾಲಕ ಎಂ.ದೊರೆಸ್ವಾಮಿ, ಶಿವಕುಮಾರ್, ನಂಜುಂಡಸ್ವಾಮಿ, ರಂಗಸ್ವಾಮಿ ಮಾಡ್ರಹಳ್ಳಿ, ಚಂದ್ರ ಶೇಖರ್, ಸಿ.ಸಿದ್ದರಾಜು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net