

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಹೆಣ್ಣಾಗಲಿ, ಗಂಡಾಗಲಿ ಹಿಂದೂ ತಾಯಂದಿರು ಮೂರಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕು. ಸಾಕಲು ಕಷ್ಟವಾದರೆ ಆ ಮಕ್ಕಳ ಜವಾಬ್ದಾರಿಯನ್ನು ಶ್ರೀ ರಾಮ ಸೇನೆ ತೆಗೆದುಕೊಳ್ಳುತ್ತದೆ ಎಂದು ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಶ್ರೀ ರಾಮ ಸೇನೆ ಹುಬ್ಬಳ್ಳಿ ಧಾರವಾಡ ಜಿಲ್ಲಾ ಘಟಕ ಆಯೋಜಿಸಿದ್ದ ತ್ರಿಶೂಲ ದೀಕ್ಷೆ ಹಾಗೂ ಲವ್ ಜಿಹಾದ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಎರಡನೇ ಮಗುವಿನ ನಂತರ ಎಷ್ಟೇ ಮಕ್ಕಳು ಹುಟ್ಟಿದರೂ (ಸಾಕಲು ಸಾಧ್ಯವಾಗದಿದ್ದರೆ) ಅವರ ಶಿಕ್ಷಣ, ಆರೋಗ್ಯ, ಮದುವೆಯ ಜವಾಬ್ದಾರಿ ನಾವು ತೆಗೆದುಕೊಳ್ಳುತ್ತೇವೆ. ಇದಕ್ಕಾಗಿ ಶೀಘ್ರದಲ್ಲೇ ಹುಬ್ಬಳ್ಳಿಯ ಶ್ರೀ ಮಾತಾ ಆಶ್ರಮದ ಸಹಯೋಗದೊಂದಿಗೆ ಗುರುಕುಲ ಪ್ರಾರಂಭ ಮಾಡಲಿದ್ದೇವೆ ಎಂದರು.
ಹಿಂದುಗಳು ‘ನಾವಿಬ್ಬರು-ನಮಗಿಬ್ಬರು’ ಎಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ಕೆಲವರು ‘ಹಮ್ ಪಾಂಚ್-ಹಮಾರೆ ಪಚ್ಚೀಸ್’ ಎಂಬ ನೀತಿಯನ್ನು ಪಾಲಿಸುತ್ತಿದ್ದಾರೆ. ಇದರಿಂದ ಜನಸಂಖ್ಯೆ ಹೆಚ್ಚಿಸುವ ಹುನ್ನಾರ ನಡೆದಿದೆ. ಲವ್ ಜಿಹಾದ್ ಮೂಲಕ ಭಾರತವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಲವ್ ಜಿಹಾದ್ ಮೂಲ ಉದ್ದೇಶವೇ ಹಿಂದು ಹುಡುಗಿಯರಿಗೆ ಮೋಸ ಮಾಡುವುದಾಗಿದೆ. ಇದನ್ನು ನಾವೆಲ್ಲ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.
ಉತ್ತಮ ಚಾರಿತ್ರ್ಯ ಕಲಿಸಿ
ಸಾನ್ನಿಧ್ಯ ವಹಿಸಿದ್ದ ಮಾತಾ ಆಶ್ರಮದ ಮಾತಾ ತೇಜೋಮಯಿ ಮಾತನಾಡಿ, ಹೆಣ್ಣು ಮಕ್ಕಳು ಲವ್ ಜಿಹಾದ್ಗೆ ಬಲಿಯಾಗುತ್ತಿದ್ದರೂ ತಾಯಂದಿರು ಕಣ್ಣು ಮುಚ್ಚಿಕೊಂಡಿದ್ದಾರೆ. ಹೆಣ್ಣು ಮಕ್ಕಳಿಗೆ ಉತ್ತಮ ಚಾರಿತ್ರ್ಯ ಹೇಳಿ ಕೊಡಬೇಕು. ಮೈತುಂಬ ಬಟ್ಟೆ ಧರಿಸುವುದು, ಹಣೆಗೆ ಕುಂಕುಮ ಇಡುವುದು, ಕೈಗೆ ಬಳೆ ತೊಡುವುದನ್ನು ಹೇಳಬೇಕು. ಇವುಗಳನ್ನು ಇಂದಿನ ಶಾಲೆಗಳಲ್ಲಿ ಕಲಿಸುವುದಿಲ್ಲ. ಎಲ್ಲಿಯವರೆಗೆ ಹೆಣ್ಣು ಮಕ್ಕಳಿಗೆ ಶಿಕ್ಣಣದ ಜತೆ ಚಾರಿತ್ರ್ಯ ಬಗ್ಗೆ ಹೇಳುವುದಿಲ್ಲವೋ ಅಲ್ಲಿಯವರೆಗೆ ಲವ್ ಜಿಹಾದ್ ನಿಲ್ಲುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಲವ್ ಜಿಹಾದ್ ಕಿತ್ತು ಹಾಕುವ ಸಂಕಲ್ಪದೊಂದಿಗೆ ಕಳೆದ 23 ವರ್ಷಗಳಿಂದ ಶ್ರೀ ರಾಮ ಸೇನೆ ಕೆಲಸ ಮಾಡುತ್ತಿದೆ. ಇಲ್ಲಿಯವರೆಗೆ ಲವ್ ಜಿಹಾದ್ಗೆ ಸಿಲುಕಿದ 4800 ಸಹೋದರಿಯರನ್ನು ವಾಪಸ್ ಕರೆತರುವ ಕೆಲಸ ಮಾಡಿದ್ದೇವೆ. ಲವ್ ಜಿಹಾದ್ಗೆ ಸಿಲುಕಿರುವ ಮಹಿಳೆಯರಿಗೆ ನೆರವಾಗಲು ಕಳೆದ ವರ್ಷ ಆರಂಭಿಸಿದ ಸಹಾಯವಾಣಿಗೆ ಒಂದೇ ವರ್ಷದಲ್ಲಿ ಸುಮಾರು 2200 ಕರೆಗಳು ಬಂದಿವೆ. ಇದರಲ್ಲಿ ಶೇ.60 ರಷ್ಟು ಬಗೆಹರಿಸಿದ್ದೇವೆ ಎಂದು ತಿಳಿಸಿದರು.