ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಳ

Laxmikanth swadi
Published on

ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿಶೇಷವಾಗಿ ಕಲಬುರಗಿ ಜಿಲ್ಲೆಯಲ್ಲಿ ಹಿಂದೂತ್ವದ ಆಶಯಕ್ಕೆ ಧಕ್ಕೆ ತರುವ, ಹಿಂದೂಗಳ ಮೇಲೆ ದೌರ್ಜನ್ಯ ನಡೆಸುವ ಘಟನೆಗಳು ಹೆಚ್ಚುತ್ತಿವೆ. ಇದನ್ನು ತಡೆಯಬೇಕು ಎಂದು ಹಿಂದೂ ಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ಆಗ್ರಹಿಸಿದರು.

ಜೇವರ್ಗಿ ತಾಲೂಕಿನ ಆಂದೋಲದಲ್ಲಿ ಶ್ರೀರಾಮ, ಆಂಜನೇಯ, ಯೋಗಿ ಆದಿತ್ಯನಾಥ, ರಾಜಾಸಿಂಗ್, ಪ್ರಮೋದ ಮುತಾಲಿಕ್, ಸಿದ್ಧಲಿಂಗ ಸ್ವಾಮೀಜಿಗಳ ಭಾವಚಿತ್ರಕ್ಕೆ ಸೆಗಣಿ ಎರಚಿ, ಅವಮಾನ ಮಾಡಲಾಗಿದೆ. ಕರುಣೇಶ್ವರ ಮಠದ ನಾಮಫಲಕಕ್ಕೂ ಸೆಗಣಿ ಎರಚಿರುವುದನ್ನು ಸೋಮವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

ಕೆಲವು ಕಿಡಿಗೇಡಿಗಳು ಕಾನೂನು ಬಾಹಿರವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬೋರ್ಡ್ ಹಾಕಿ, ಆಂದೋಲಾ ಶ್ರೀಗಳಿಗೆ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಾಕಿದವರನ್ನು ಬಂಧಿಸಬೇಕು. ಕಾನೂನು ಮೀರಿ ಬೋರ್ಡ್ ಅಳವಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆಂದೋಲಾ ಸಿದ್ಧಲಿಂಗ ಶ್ರೀಗಳಿಗೆ ಅಂಗರಕ್ಷನನ್ನು ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಇಂತಹ ಘಟನೆಗಳು ಪದೇ ಪದೆ ನಡೆಯುತ್ತಿವೆ. ಹಲಕರ್ಟಿಯಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಅವಮಾನ, ಮುತ್ತಗಿಯಲ್ಲಿ ಬಸವಣ್ಣ ಮೂರ್ತಿ ಭಗ್ನದಂತ ಘಟನೆ ನಡೆಯುತ್ತಿವೆ. ಈ ಬಗ್ಗೆ ಎಚ್ಚೆತ್ತು ಕೂಡಲೇ ಸ್ಪಂದಿಸಬೇಕು. ಇಲ್ಲದಿದ್ದರೆ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net