

ಚಿತ್ರದುರ್ಗ: ಹಿಂದು-ಮುಸ್ಲಿಂ ಬೇರೆ ಎಂಬ ಬೇಧ-ಭಾವ ನಮ್ಮ ಧರ್ಮ ಎಂದಿಗೂ ಹೇಳಿಕೊಟ್ಟಿಲ್ಲ. ತಾರತಮ್ಯ ಭಾವನೆಯೂ ನನ್ನಲ್ಲಿಲ್ಲ. ಹಿಂದುಸ್ತಾನ್ ಹಮಾರಾ ಹೈ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು.
ಉಮಾಪತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ನಾನೂ ಮೊದಲು ಭಾರತೀಯ. ಅದರಲ್ಲೂ ಕನ್ನಡಿಗ ಎಂದ ಅವರು, ಬಿಜೆಪಿಯಿಂದ ಯಾವ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಹೀಗಾಗಿ ದೇವರು-ಧರ್ಮದ ಹೆಸರಿನಲ್ಲಿ ಚುನಾವಣೆ ಎದುರಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ಮುಸ್ಲಿಂ, ದಲಿತ ಸಮುದಾಯವನ್ನೇ ಟಾರ್ಗೆಟ್ ಮಾಡಿಕೊಂಡು ಬಂದಿದೆ. ಈ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಬೇಸರಿಸಿದರು.
ವೀರಪ್ಪಮೊಯ್ಲಿ, ಎಚ್.ಡಿ.ದೇವೇಗೌಡರು ಈ ಹಿಂದೆ ರಾಜ್ಯದ ಸಿಎಂ ಆಗಿದ್ದ ಅವಧಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ 6ರಷ್ಟು ಮೀಸಲಿಗೆ ಶಿಫಾರಸು ಮಾಡಿದ್ದರ ಫಲ ಶೇ 4ರಷ್ಟು ಮೀಸಲು ಸಿಕ್ಕಿತು. ಅದನ್ನು ಕೂಡ ಬಿಜೆಪಿ ಕಿತ್ತುಕೊಂಡಿತು. ಆದರೆ, ಕಾಂಗ್ರೆಸ್ ಯಾವ ಸಮಾಜಕ್ಕೂ ಅನ್ಯಾಯ ಮಾಡಿಲ್ಲ ಎಂದರು.
2018ರಿಂದ 2023ರ ಅವಧಿಯೊಳಗೆ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದರು. ಆದರೆ, ರಾಜ್ಯದಲ್ಲಿ ಬಡವರಿಗಾಗಿ ಒಂದೂ ಮನೆ ಏಕೆ ನಿರ್ಮಿಸಿಕೊಟ್ಟಿಲ್ಲ ಎಂದು ಪ್ರಶ್ನಿಸಿದರು.
ಸಚಿವ ಡಿ.ಸುಧಾಕರ್, ಇಲ್ಲಿನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಸಮಾಜವಾದಿ ಪಕ್ಷದ ಮುಖಂಡ ಮಂಜಪ್ಪ, ಎಎಪಿ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ಇತರರಿದ್ದರು.