ಹಿಂದುಳಿದಿರುವ ಜನಾಂಗಕ್ಕೆ ಮೀಸಲು ಅಗತ್ಯ

Published on

ಮೈಸೂರು: ಪಂಚಮಸಾಲಿ ಲಿಂಗಾಯತರಿಗೆ ಪ್ರವರ್ಗ ‘2ಎ’ ಮೀಸಲಾತಿ ನೀಡದಂತೆ ಕೆಲವರು ಒತ್ತಾಯ ಮಾಡುತ್ತಿರುವುದು ಸರಿಯಲ್ಲ. ಆರ್ಥಿಕವಾಗಿ ತೀರ ಹಿಂದುಳಿದಿರುವ ಜನಾಂಗಕ್ಕೆ ಮೀಸಲು ಅಗತ್ಯವಿದೆ ಎಂದು ಲಿಂಗಾಯತಗೌಡ ಮಹಾಸಭಾ ರಾಜ್ಯ ಕಾರ್ಯದರ್ಶಿ ಕೇಬಲ್ ಮಹೇಶ್ ಹೇಳಿದರು.
ಸಮುದಾಯದ ಬಹುಪಾಲು ಜನರು ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿರುವ ನಮ್ಮ ಸಮುದಾಯದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಸಾಲ ಮಾಡಿಕೊಂಡು ವ್ಯವಸಾಯ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಂಚಮಸಾಲಿ, ಲಿಂಗಾಯತ, ಮಲೆಗೌಡ, ದೀಕ್ಷಗೌಡ, ಗೌಳಿ ಲಿಂಗಾಯತ ಒಳಪಂಗಡದ ಮಕ್ಕಳಿಗೆ ಮೀಸಲಾತಿ ಸಿಗದೆ ವಿದ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ 2ಎ ಮೀಸಲಾತಿ ಸಿಕ್ಕಲ್ಲಿ ಇದರಿಂದ ಅನುಕೂಲವಾಗುತ್ತದೆ ಎಂದರು.
ಆದ್ದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ಪಟ್ಟಭದ್ರಶಕ್ತಿಗಳು ಸಮುದಾಯಕ್ಕೆ ಮೀಸಲಾತಿ ನೀಡುವುದನ್ನು ವಿರೋಧಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಮಹಾಸಭಾದ ನಗರಾಧ್ಯಕ್ಷ ಬಸವರಾಜೇಂದ್ರಸ್ವಾಮಿ, ಪದಾಧಿಕಾರಿಗಳಾದ ಕಣೇನೂರು ಜಗದೀಶ, ವಿರೂಪಾಕ್ಷಮ್ಮ, ಸಿದ್ದೇಶ್‌ಬಾಬು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net