ಹಿಂದುಳಿದವರು ಮತ ಬ್ಯಾಂಕ್ ಅಲ್ಲ: ರವಿಕುಮಾರ್ ಅಭಿಮತ

2
Published on

ಮೈಸೂರು: ಕೇವಲ ಮತಕ್ಕಾಗಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದವರನ್ನು ಕಾಂಗ್ರೆಸ್ ಒತ್ತೆಯಾಳುಗಳಂತೆ ಇಟ್ಟುಕೊಂಡಿತ್ತು. ಆದರೆ ಬಿಜೆಪಿ ಐತಿಹಾಸಿಕ ನಿರ್ಣಯ ತೆಗೆದುಕೊಂಡು ಒಳ ಮೀಸಲು ನೀಡುವ ಮೂಲಕ ಬಹುದಿನಗಳ ಬೇಡಿಕೆ ಈಡೇರಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.
ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ಸಮುದಾಯಕ್ಕೆ ಮೀಸಲಾತಿ ನೀಡದೆ ಕಾಂಗ್ರೆಸ್ ಅವರನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡು ವಂಚಿಸುತ್ತ ಬರುತ್ತಿತ್ತು ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಹಲವು ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದರೂ ಕಾಂಗ್ರೆಸ್ ತಳಸಮುದಾಯಗಳ ಬೇಡಿಕೆ ಈಡೇರಿಸದೆ ಕಾಲ ತಳ್ಳುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದು, ಎಸ್‌ಸಿ, ಎಸ್‌ಟಿ, ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಿರುವುದಲ್ಲದೆ, ಒಳ ಮೀಸಲಾತಿಯನ್ನೂ ನೀಡಿದೆ ಎಂದರು.
ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ, ಧ್ವನಿ ನೀಡುವ, ಉದ್ಯೋಗ, ಸವಲತ್ತು ಕಲ್ಪಿಸುವ ಕೆಲಸ ಮಾಡುವ ಮೂಲಕ ನಮ್ಮದು ರೈತರ ಸರ್ಕಾರವಾಗಿದೆ. ರೈತರ ಪರವಾಗಿ ಹಲವು ಮಹತ್ವದ ನಿರ್ಧಾರ ತೆಗೆದುಕೊಂಡ ಮೊದಲ ಸರ್ಕಾರ ನಮ್ಮದು ಎಂದರು.
ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಿದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆರೆ ತುಂಬಿಸುವ ಯೋಜನೆ, ರೈತ ಬಜೆಟ್ ಮಂಡಿಸಲಾಗಿದೆ. ಮಹಿಳೆಯರ ಪರವಾಗಿಯೂ ದೃಢನಿರ್ಧಾರ ಮಾಡಿದ್ದು, ಪ್ರತಿ ಹಳ್ಳಿಯ ಎರಡು ಎನ್‌ಜಿಒಗಳಿಗೆ ಎರಡು ಲಕ್ಷ ರೂ. ನೀಡಲಾಗುತ್ತಿದೆ. ಯುವಜನರಿಗೆ ಉದ್ಯೋಗ ಆರಂಭಿಸಲು ನೆರವು ನೀಡಲಾಗುತ್ತಿದೆ ಎಂದು ಹೇಳಿದರು.
ಅಭಿವೃದ್ಧಿ ಪರ್ವ:
ರಾಜ್ಯದಲ್ಲಿ 11 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಜಲಜೀವನ ಮಿಷನ್ ಮೂಲಕ 61 ಲಕ್ಷ ಮನೆಗಳಿಗೆ ನೀರು ನೀಡಲಾಗುತ್ತಿದೆ. ರಾಜ್ಯದ 50 ಲಕ್ಷ ಕುಟುಂಬಕ್ಕೆ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ದೊರೆಯುತ್ತಿದೆ. ರೈಲು, ವಿಮಾನ ನಿಲ್ದಾಣಗಳ ಅಭಿವೃದ್ಧಿಯಾಗುತ್ತಿದೆ. ರಾಜ್ಯದಲ್ಲಿ ಮತ್ತೆ ಡಬಲ್ ಇಂಜಿನ್ ಸರ್ಕಾರ ಬಂದರೆ ಅಭಿವೃದ್ಧಿ ಪರ್ವ ಮುಂದುವರಿಯಲಿದೆ ಎಂದು ಎನ್.ರವಿಕುಮಾರ್ ಭರವಸೆ ನೀಡಿದರು.
ಚುನಾವಣೆಗಾಗಿ ಮೀಸಲಾತಿ ಹೆಚ್ಚಿಸಲಾಗಿದೆ. ಒಳ ಮೀಸಲು ನೀಡಲಾಗಿದೆ ಎಂಬುದಾಗಿ ಕಾಂಗ್ರೆಸ್, ಜೆಡಿಎಸ್ ಟೀಕೆ ಮಾಡುತ್ತಿವೆ. ಪರಿಷ್ಕೃತ ಮೀಸಲಾತಿಯನ್ನು ಶತಾಯಗತಾಯ ಜಾರಿ ಮಾಡುತ್ತೇವೆ. ನೂರಕ್ಕೆ ನೂರು ಬಹುಮತ ತಂದುಕೊಡುವಂತಹ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಪಕ್ಷದ ಸಂಸದೀಯ ಮಂಡಳಿ ಪ್ರಕಟಿಸಲಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.

ನಂದಿನಿಗೆ ಸಾಮರ್ಥ್ಯ ಎದುರಿಸುವ ಶಕ್ತಿ
ಕೆಎಂಎಫ್‌ನ ನಂದಿನಿ ಉತ್ಪನ್ನಗಳ ವಿಷಯವಾಗಿ ಕಾಂಗ್ರೆಸ್ ನಾಯಕರು ಬಿಜೆಪಿಗೆ ಕಪ್ಪುಚುಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಅಮೂಲ್‌ಗೆ ನಂದಿನಿ ಸ್ಪರ್ಧಿ ಅಲ್ಲ. ಒಂದು ವೇಳೆ ಸ್ಪರ್ಧೆ ಏರ್ಪಟ್ಟರೆ ಅದನ್ನು ಎದುರಿಸುವ ಸಾಮರ್ಥ್ಯ ನಂದಿನಿಗೆ ಇದೆ. ಗೋಹತ್ಯೆ ನಿಷೇಧ ವಿರೋಧಿಸುವವರಿಗೆ ಕೆಎಂಎಫ್ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ರವಿಕುಮಾರ್ ಕಿಡಿಕಾರಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೆಎಂಎಫ್ ಸಾಮರ್ಥ್ಯ ಹೆಚ್ಚಾಗಿದೆ. ಕಾಂಗ್ರೆಸ್‌ನವರು ಸುಮ್ಮನೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಲು ಉತ್ಪಾದನೆ ಹೆಚ್ಚಾಗಬೇಕು ಎನ್ನುತ್ತಾರೆ. ಮತ್ತೊಂದೆಡೆ ಹಸುಗಳನ್ನು ಕಸಾಯಿಖಾನೆಗೆ ಕಳುಹಿಸುತ್ತಾರೆ. ಇದು ದ್ವಿಮುಖ ನೀತಿಯಲ್ಲವೇ ಎಂದು ಪ್ರಶ್ನಿಸಿದರು.
ಅಮೂಲ್‌ನೊಂದಿಗೆ ಕೆಎಂಎಫ್ ವಿಲೀನ ಪ್ರಶ್ನೆಯೇ ಇಲ್ಲ. ನಂದಿನಿಯನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸ ಮಾಡಲಾಗುತ್ತಿದೆ. ರೈತರ ಉತ್ಪಾದನೆಗಳು ನಮ್ಮ ರಾಜ್ಯದಲ್ಲೇ ಇರಬೇಕೇ? ಬೇರೆ ರಾಜ್ಯಗಳಿಗೆ ಹೋಗಬೇಕೇ ಎಂಬುದನ್ನು ಸಿದ್ದರಾಮಯ್ಯ, ಡಿಕೆಶಿ ತಿಳಿಸಲಿ ಎಂದರು.
ಮಾಧ್ಯಮ ಕೇಂದ್ರ ಆರಂಭ:
ಚುನಾವಣೆ ಸಂಬಂಧ ಮಾಹಿತಿ ನೀಡುವ ಸಲುವಾಗಿ ಬಿಜೆಪಿ ಮೈಸೂರು ವಿಭಾಗದ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಲಾಯಿತು.
ಸಂಸದ ಪ್ರತಾಪಸಿಂಹ, ಮೇಯರ್ ಶಿವಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net