

ಚಿತ್ರದುರ್ಗ: ಅತಿ ಹಿಂದುಳಿದ ಸಮುದಾಯಗಳ ಉದ್ಧಾರ ಪಂಚಾಂಗದಲ್ಲಿಲ್ಲ. ರಾಜ್ಯಾಂಗದಲ್ಲಿದೆ ಎಂದು ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಬಸವನಾಗಿದೇವ ಶ್ರೀ ತಿಳಿಸಿದರು.
ತರಾಸು ರಂಗಮಂದಿರದಲ್ಲಿ ಈಚೆಗೆ ನಡೆದ ಪೂರ್ವಭಾವಿ ಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದರು.
ದೇವರು-ಧರ್ಮದ ವಿಚಾರವಾಗಿ ಸಿಡಿದೇಳುತ್ತಿದ್ದ ನಾವುಗಳೀಗ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ಆದರೆ, ಈ ಸಮುದಾಯಗಳು ಅದರಡಿ ಮೀಸಲಾತಿ, ಸೌಲಭ್ಯ ಪಡೆಯಲು ಹಿಂದುಳಿದಿವೆ. ಹಕ್ಕು ಪಡೆಯಲಿಕ್ಕಾಗಿ ಮುಂದಿನ ವರ್ಷ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕಾನೂನಿನ ಅರಿವು ಇಲ್ಲದಿರುವ ಕಾರಣಕ್ಕೆ ಹಿಂದುಳಿದ ಸಮಾಜದವರೆ ಜೈಲುವಾಸ ಅನುಭವಿಸುತ್ತಿದ್ದಾರೆ. ಹೀಗಾಗಿ ಜಾಗೃತಿ ಮೂಡಿಸೋಣ. ದೇವರು, ಧರ್ಮದ ಜೊತೆಗೆ ಸಂವಿಧಾನ ಮಹತ್ವದ ಕುರಿತು ಎಲ್ಲರಿಗೂ ತಿಳಿಸೋಣ. ಕೊರೆಗಾಂವ್ ಹೋರಾಟ ನಮಗೆ ಮಾದರಿಯಾಗಿದೆ. ಆದರೆ, ಕತ್ತಿ, ಗುರಾಣಿ, ಬಂದೂಕಿನ ಅಗತ್ಯವಿಲ್ಲ. ಪೆನ್ನಿನ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ ಎಂದು ಸಲಹೆ ನೀಡಿದರು.
ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ಪ್ರಣವಾನಂದರಾಮ್ ಶ್ರೀ ಮಾತನಾಡಿ, ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಸಮಾವೇಶ ಆಯೋಜಿಸಿ, ಹಕ್ಕುಗಳನ್ನು ಪಡೆಯಲು ಸರ್ಕಾರವನ್ನು ಒತ್ತಾಯಿಸಲಾಗುವುದು. ಪಕ್ಷ, ಜಾತಿ, ಧರ್ಮಾತೀತವಾಗಿ ನಡೆಯಲಿದೆ ಎಂದರು.
ಅಂಬೇಡ್ಕರ್ ಅವರ ಸಮ ಸಮಾಜದ ಕನಸು ನನಸಾಗಲು ಅತಿ ಹಿಂದುಳಿದ ಸಮುದಾಯಗಳು, ಮಠಗಳು ಸರ್ಕಾರದ ಸೌಲಭ್ಯ ಪಡೆಯುವಂತಾಗಬೇಕು. ಈ ಉದ್ದೇಶದಿಂದ ಸಮಾವೇಶಕ್ಕೆ ತೀರ್ಮಾನಿಸಲಾಗಿದ್ದು, ಈಗಿನಿಂದಲೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಜಾಗೃತಿ ಮೂಡಿಸಲು ಮುಂದಾಗೋಣ ಎಂದು ಸಲಹೆ ನೀಡಿದರು.
ರಾಜ್ಯಾದ್ಯಂತ ಹಿಂದುಳಿದವರು ಸಂಘಟಿತರಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಂದೆ ಶಕ್ತಿ ಪ್ರದರ್ಶಿಸುವ ಮೂಲಕ ಸೌಲಭ್ಯ ಪಡೆಯಬೇಕಿದೆ ಎಂಬ ಸಲಹೆ ಕೇಳಿಬಂದವು.
ಎಂಎಲ್ಸಿ ಬಿ.ಕೆ.ಹರಿಪ್ರಸಾದ್, ಬಸವಮೂರ್ತಿ ಕುಂಬಾರ ಗುಂಡಯ್ಯ ಶ್ರೀ, ದೊಡ್ಡೇಂದ್ರ ಶ್ರೀ, ವೇದವ್ಯಾಸ ಶ್ರೀ, ಗೋವಿಂದಾಚಾರ್ಯ ಶ್ರೀ, ಕರ್ಣಾಕರ ಶ್ರೀ ಇತರರಿದ್ದರು.