

ಬಸವನಬಾಗೇವಾಡಿ: ವಚನ ಸಾಹಿತ್ಯದ ಮೂಲಕ ಜಗತ್ತಿಗೆ ಸಮಾನತೆಯನ್ನು ಸಾರಿದಂತಹ ಅಣ್ಣ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಮಾಜಿ ಸಿಎಂ ದಿ. ಡಿ. ದೇವರಾಜ ಅರಸರು ಜೀವನದಲ್ಲಿ ಅಳವಡಿಸಿಕೊಂಡು ಹಿಂದುಳಿದ ವರ್ಗದ ಜನಾಂಗದವರಿಗೆ ನ್ಯಾಯ ಒದಗಿಸಿಕೊಟ್ಟ ಧೀಮಂತ ನಾಯಕರು ಎಂದು ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಬಿ.ಎಸ್. ಹಂಚಲಿ ಹೇಳಿದರು.
ಪಟ್ಟಣದ ಬಸವ ಜನ್ಮಸ್ಮಾರಕ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಮಾಜಿ ಸಿಎಂ ದಿ. ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ಅತ್ಯಂತ ತುಳಿತಕ್ಕೆ ಒಳಗಾಗಿರುವ ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಹೋರಾಟ ಮಾಡಿದರು. ಅದರ ಫಲದಿಂದ ಇಂದು ಹಿಂದುಳಿದ ವರ್ಗದ ಅದೆಷ್ಟೋ ಜನರು ವಿವಿಧ ಹುದ್ದೆಗಳಲ್ಲಿ ಅಧಿಕಾರ ಪಡೆಯಲು ಸಹಕಾರವಾಗಿದೆ ಎಂದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಹಿಂದುಳಿದ ವರ್ಗದ ಜನರಿಗೆ ಸಮಾಜದಲ್ಲಿ ಉತ್ತಮ ಶಿಕ್ಷಣ ಮತ್ತು ಸ್ಥಾನಮಾನ ಸಿಗಬೇಕೆಂಬ ಮಹಾದಾಸೆಯೊಂದಿಗೆ ದೇವರಾಜ ಅರಸರು ಯೋಜನೆ ರೂಪಿಸಿದ ಫಲದಿಂದ ಇಂದು ಎಲ್ಲ ರಂಗದಲ್ಲಿಯೂ ಹಿಂದುಳಿದ ವರ್ಗದ ಜನರು ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಪ್ರಭಾರ ತಹಸೀಲ್ದಾರ್ ಜಿ.ಎಸ್. ನಾಯಕ ಉದ್ಘಾಟಿಸಿದರು. ತಾಲೂಕಾ ಹಿಂದುಳಿದ ವರ್ಗದ ಕಲ್ಯಾಣಾಧಿಕಾರಿ ಎಸ್.ವಿ. ನಿಂಬಾಳ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ವಿಮಾ ಮಂಡಳಿ ಅಧ್ಯಕ್ಷ ಶಿವನಗೌಡ ಬಿರಾದಾರ, ಡಿಎಸ್‌ಎಸ್ ಜಿಲ್ಲಾ ಮುಖಂಡರಾದ ಅರವಿಂದ ಸಾಲವಾಡಗಿ, ಅಶೋಕ ಚಲವಾದಿ, ಮಹಾಂತೇಶ ಸಾಸಾಬಳ, ಪುರಸಭೆ ಸದಸ್ಯ ಅಶೋಕ ಹಾರಿವಾಳ, ಶರಣಗೌಡ ನ್ಯಾಮನ್ನವರ, ಪಿಡಬ್ಲುೃಡಿ ಎಇಇ ಜಿ.ವಿ. ಕಿರಸೂರ, ಚಂದ್ರಶೇಖರಗೌಡ ಪಾಟೀಲ, ಬಸವರಾಜ ಅವಟಿ ಇತರರಿದ್ದರು.
ಯೋಜನಾಧಿಕಾರಿ ಸಿ.ಜಿ. ಬಿರಾದಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಧರ ಕುಂಟೋಜಿ ನಿರೂಪಿಸಿದರು. ಜಗದ್ಗುರು ಹಿರೇಮಠ ವಂದಿಸಿದರು. 2022/23ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಮತ್ತು ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.