ಹಿಂದುಳಿದ ವರ್ಗದ ಮಹಿಳೆಗೆ ಸಿಗದ ಕಾಂಗ್ರೆಸ್ ಟಿಕೆಟ್

download
Published on

ಬೀದರ್: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದುಳಿದ ವರ್ಗದ ಮಹಿಳೆಗೆ ಕಾಂಗ್ರೆಸ್ ಟಿಕೆಟ್ ಕೊಡದ್ದಕ್ಕೆ ಕಾಂಗ್ರೆಸ್ ಪ್ರಮುಖರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿ ಹಿಂದುಳಿದ ವರ್ಗದ ಮಹಿಳೆಗೆ ಟಿಕೆಟ್ ಕೊಡಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಅದು ಹುಸಿಯಾಗಿದೆ ಎಂದು ಪ್ರಮುಖರಾದ ಲೋಕೇಶ ಮರ್ಜಾಪುರ, ಸಂತೋಷ ಮಲ್ಕಾಪುರ, ಓಂಕಾರ ಬಗದಲ್, ಬಾಬು ಅಷ್ಟೂರ, ಬೀರಪ್ಪ ಕೊಳಾರ, ಆನಂದ ಕಮಠಾಣ, ನಾಗಪ್ಪ ಕಾಶೆಂಪುರ, ಅಂಜಮ್ಮ ಬಗದಲ್, ಕಲಾವತಿ ಚಿಟ್ಟಾವಾಡಿ, ತೇಜಮ್ಮ ಚಿಟ್ಟಾವಾಡಿ, ಧನರಾಜ ಚಿಟ್ಟಾವಾಡಿ ಹಾಗೂ ಸುರಕಿತಾ  ಹೇಳಿದ್ದಾರೆ.
ಹಿಂದುಳಿದ ವರ್ಗಕ್ಕೆ ಸೇರಿದ ಗೀತಾ ಪಂಡಿತರಾವ್ ಚಿದ್ರಿ ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ, ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಅವರ ಸಾಮಾಜಿಕ ಸೇವೆ ಪರಿಗಣಿಸಿ, ಬೀದರ್ ದಕ್ಷಿಣದ ಟಿಕೆಟ್ ಕೊಡಬೇಕಿತ್ತು. ಆದರೆ, ಹಾಗೆ ಆಗಿಲ್ಲ. ಇದರಿಂದಾಗಿ ಬೀದರ್ ದಕ್ಷಿಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೇಸರಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಗೀತಾ ಚಿದ್ರಿ ಅವರು ಬೀದರ್ ದಕ್ಷಿಣ ಕ್ಷೇತ್ರದಾದ್ಯಂತ ಸಂಚರಿಸಿ ಪಕ್ಷ ಸಂಘಟಿಸಿದ್ದಾರೆ. ಅವರಿಗೆ ಟಿಕೆಟ್ ನೀಡಿದರೆ ಗೆಲ್ಲುವ ಸಂಪೂರ್ಣ ವಿಶ್ವಾಸ ಇತ್ತು. ಆದರೆ, ವರಿಷ್ಠರು ಅವರನ್ನು ಕಡೆಗಣಿಸಿರುವುದು ಸರಿಯಲ್ಲ. ಪಕ್ಷಕ್ಕೆ ದುಡಿದವರನ್ನು ನಿರ್ಲಕ್ಷಿಸಿದರೆ ಚುನಾವಣೆಯಲ್ಲಿ ಪಕ್ಷದ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net