ಹಿಂದುಳಿದ ವರ್ಗಗಳು ಆರ್ಥಿಕವಾಗಿ ಮುಂದೆ ಬನ್ನಿ

19rajesh1
Published on

ಚಾಮರಾಜನಗರ: ಉಪ್ಪಾರ ಸಮುದಾಯ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು, ಆರ್ಥಿಕವಾಗಿ ಮುಂದೆ ಬರಬೇಕು ಎಂದು ಬೆಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್ ಸಲಹೆ ನೀಡಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಉಪ್ಪಾರ ಯುವಕರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ಉಪ್ಪಾರ ಸಮುದಾಯದಲ್ಲಿ ಒಗ್ಗಟ್ಟು ಕಡಿಮೆಯಾಗುತ್ತಿದ್ದು, ಈ ಕುರಿತು ಸಮುದಾಯದ ಯುವಕರು ಜಾಗೃತಿಯಾಗಬೇಕು. ನಮ್ಮ ನಮ್ಮಲ್ಲೇ ಕಾಲೆಳೆಯುವ ಪ್ರವೃತ್ತಿಯನ್ನು ಬಿಡಬೇಕು. ಸಹೋದರ ಸಮಾಜಗಳನ್ನು ನೋಡಿ ಮುಖ್ಯವಾಹಿನಿಗೆ ಬರಬೇಕು. ಜಿಲ್ಲಾ ಉಪ್ಪಾರ ಯುವಕರ ಸಂಘವು ಸಮಾಜದ ಪರ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಮಾಜದ ಬೆಳವಣಿಗೆಗೆ ಶ್ರಮಿಸುತ್ತಿರುವುದು ಬಹಳ ಅರ್ಥಪೂರ್ಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮುದಾಯದ ಯುವಕರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಉನ್ನತ ಶಿಕ್ಷಣ ಮಾಡುವ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು. ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಜಯಕುಮಾರ್ ಮಾತನಾಡಿ, ಪ್ರತಿವರ್ಷವೂ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಮುದಾಯದ ಏಳಿಗೆಗೆ ಸಂಘವು ಶ್ರಮಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಹದೇವಶ್ವರ ಬೆಟ್ಟದ ಪ್ರಾಧಿಕಾರದ ನೂತನ ಸದಸ್ಯ ಕಾಗಲವಾಡಿ ಮೋಳೆ ಮರಿಸ್ವಾಮಿ, ಬಿಳಿಗಿರಿರಂಗನ ಬೆಟ್ಟದ ಪ್ರಾಧಿಕಾರ ನೂತನ ಸದಸ್ಯ ಬೂದಂಬಳ್ಳಿಮೋಳೆ ಸಿದ್ದರಾಜು, ಜಾನಪದ ಪ್ರಶಸ್ತಿ ಪುರಸ್ಕೃತ ದೊಡ್ಡಗವಿ ಬಸಪ್ಪ, ನಗರಸಭಾ ನಾಮನಿರ್ದೇಶನ ಸದಸ್ಯ ಸಿದ್ದರಾಜು ಭಗೀರಥ, ನಗರಾಭಿವೃದ್ಧಿ ಪ್ರಾಧಿಕಾರ ನೂತನ ಸದಸ್ಯ ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಣ್ಣ,ಸರ್ಕಾರಿ ಐಟಿಐ ಕಾಲೇಜು ಪ್ರಾಂಶುಪಾಲ ಟಿ.ಎಂ.ರಂಗಸ್ವಾಮಿ, ಟೌನ್ ಉಪ್ಪಾರ ಸಂಘದ ಅಧ್ಯಕ್ಷ ರಾಚಶೆಟ್ಟಿ, ಜಿಲ್ಲಾ ಉಪ್ಪಾರ ಯುವಕರ ಸಂಘದ ಉಪಾಧ್ಯಕ್ಷ ಬಿ.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಎಸ್.ನಾಗರಾಜು, ಶಿವಕುಮಾರ್, ಕೆ.ಮಹದೇವ ಸ್ವಾಮಿ, ಕೂಡ್ಲೂರು ಗುರುಸ್ವಾಮಿ, ನಿಟ್ರೆ ನಾಗರಾಜು, ಯುವ ಕಾಂಗ್ರೆಸ್ ಮುಖಂಡ ಶ್ರೀನಿವಾಸ, ಎಎಸ್‌ಐ ಬಾಗಳಿ ಮಹದೇವಸ್ವಾಮಿ, ಮುಖ್ಯಪೇದೆ ಮಂಜುನಾಥ್ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net