ಹಿಂದುಳಿದ ವರ್ಗಗಳ ಜೀವನಮಟ್ಟ ಸುಧಾರಿಸಿದ ನಾಯಕ

20 mlv 1
Published on

ಮಳವಳ್ಳಿ: ಉಳುವವನೇ ಭೂಮಿ ಒಡೆಯ ಕಾನೂನನ್ನು ಮಾಜಿ ಮುಖ್ಯಮಂತ್ರಿ ಡಿ. ದೇವರಾಜು ಅರಸು ಅವರು ತರದಿದ್ದರೆ ಸಮಾಜದಲ್ಲಿ ಬಡವ, ಬಲ್ಲಿದನೆಂಬ ತಾರತಮ್ಯಗಳನ್ನು ಹೋಗಲಾಡಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ತಹಸೀಲ್ದಾರ್ ಡಾ.ಎಸ್.ವಿ.ಲೋಕೇಶ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ತಾಲೂಕು ಆಡಳಿತ ಹಾಗೂ ಹಿಂದುಳಿ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ 110 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅರಸು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಅರಸು ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಬಡವರ ಹಾಗೂ ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಆಯೋಗ ರಚಿಸಿ, ವರದಿ ಪಡೆದುಕೊಂಡು ಅದನ್ನು ಹಿಂದುಳಿದ ವರ್ಗದವರ ಜೀವನ ಮಟ್ಟ ಸುಧಾರಣೆಗಾಗಿ ದಿಟ್ಟ ನಿರ್ಣಯಗಳನ್ನು ಕೈಗೊಂಡು ಕಾರ್ಯರೂಪಕ್ಕೆ ತಂದವರು. ನಾಡಿನ ಹಿಂದುಳಿದ ಕೆಳ ಸಮುದಾಯದ ಒಳಿತಿಗಾಗಿ ದಿಟ್ಟ ರಾಜನೀತಿಯನ್ನು ಅನುಸರಿಸಿದ ಅರುಸು ಅವರ ಕೊಡುಗೆಯನ್ನು ಹಿಂದುಳಿದ ವರ್ಗಗಳ ಸಮುದಾಯ ಸದಾ ಸ್ಮರಿಸಬೇಕೆಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಕಲ್ಯಾಣಾಧಿಕಾರಿ ಬಿ.ಸಿ.ರೇಖಾ ಮಾತನಾಡಿ, ಹುಣಸೂರು ತಾಲೂಕಿನ ಗ್ರಾಮವೊಂದರ ಶ್ರೀಮಂತ ಮನೆತನದಲ್ಲಿ ಜನ್ಮತಳೆದ ದೇವರಾಜ ಅರುಸು ಬಡವರ ಕಲ್ಯಾಣ ಕಾರ್ಯಗಳಿಗೆ ತಮಗೆ ರಾಜಕೀಯವಾಗಿ ಸಿಕ್ಕ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಸಮಾಜಕ್ಕೆ ಅಜರಾಮರ ಕೊಡುಗೆ ನೀಡಿದ್ದಾರೆಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಪುರಸಭೆ ಅಧ್ಯಕ್ಷ ದೊಡ್ಡಯ್ಯ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ವಸತಿ ನಿಲಯ ಮೇಲ್ವಿಚಾರಕ ಸೋಮಶೇಖರ್ ಹಾಗೂ ತಾಲೂಕು ಕಚೇರಿ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net