ಬೋಗಸ್ ಬಿಲ್​ ಕೊಟ್ಟು ದುಡ್​ ತಗೊಂಡು ನಮ್ಗೂ ಕೊಡಿ ಅಂದ್ರಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ!

BCM Memo
Published on

ಬೀದರ್: ಇಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಮೇಶ ದೇವಮಾನೆ ವಿರುದ್ಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ಸಿಡಿದಿದ್ದಾರೆ. ಕಿರುಕುಳ, ದೌರ್ಜನ್ಯ, ಅವಾಚ್ಯ ಬದ ಬಳಕೆ, ಬೋಗಸ್ ಬಿಲ್ ಮಾಡಲು ಪೀಡನೆ ಸೇರಿ ಹಲವು ಗಂಭೀರ ಆರೋಪ ಹೊರಿಸಿ, ಇವರ ವಿರುದ್ಧ ಕೂಡಲೇ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇಲಾಖೆಯ ಜಿಲ್ಲಾ, ತಾಲೂಕು ಕಚೇರಿಯ ಬಹುತೇಕ ಅಧಿಕಾರಿಗಳು, ವಿಸ್ತೀರ್ಣಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಇಲಾಖೆ ವ್ಯಾಪ್ತಿಗೆ ಬರುವ ಮುರಾರ್ಜಿ ದೇಸಾಯಿ ಶಾಲೆ ಪ್ರಾಂಶುಪಾಲರು ಮಂಗಳವಾರ ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಅವರಿಗೆ ಈ ಕುರಿತು ಸಹಿ ಮಾಡಿ ಸಮಗ್ರ ವಿವರವುಳ್ಳ ದೂರು ಸಲ್ಲಿಸಿದ್ದಾರೆ. ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೂ ಈ ದೂರು ನೀಡಿ ತಮ್ಮ ಗೋಳು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ನೇತೃತ್ವದ ನಿಯೋಗ ಬುಧವಾರ ಸಿಇಒ ಅವರಿಗೆ ಭೇಟಿಯಾಗಿ ಈ ಸಂಬಂಧ ಪ್ರತ್ಯೇಕ ದೂರು ಸಲ್ಲಿಸಿ, ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಅಧಿಕಾರಿ ದೇವಮಾನೆ ಅವರು ಮಾನಸಿಕ ಹಿಂಸೆ, ಕಿರುಕುಳ ಕೊಡುತ್ತಿದ್ದಾರೆ. ಅವಾಚ್ಯ ಪದ ಬಳಕೆ, ಹಣಕ್ಕಾಗಿ ಪೀಡನೆ, ವೈಯಕ್ತಿಕ ವಿಷಯ ಕೆದಕಿ ಮಹಿಳಾ ಸಿಬ್ಬಂದಿಗಳಿಗೆ ಮುಜುಗರಕ್ಕೀಡು ಮಾಡುವುದು ಸೇರಿ ನಾನಾ ತರಹದ ಕಿರಿಕಿರಿ ಕೊಡುತ್ತಿದ್ದಾರೆ. ಇವರ ಈ ವರ್ತನೆ ಖಂಡನೀಯ. ಅಧಿಕಾರಿ, ನೌಕರರ ಹಿತದಿಂದ ಕೂಡಲೇ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.

ಅಧಿಕಾರಿ, ಸಿಬ್ಬಂದಿಗಳೊಂದಿಗೆ ವಿನಾಕಾರಣ ಅನುಚಿತ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ನಿಗದಿತ ಸಮಯದ ನಂತರ ಬಾಲಕಿಯರ ವಸತಿ ನಿಲಯಗಳಿಗೆ ಭೇಟಿ ನೀಡಿ, ಮಹಿಳಾ ಸಿಬ್ಬಂದಿಯವರೊಂದಿಗೆ ಇಲ್ಲಸಲ್ಲದ ವಿಷಯ ಕೇಳಿ ಘಾಸಿಗೊಳಿಸುತ್ತಿದ್ದಾರೆ. ಸಿಬ್ಬಂದಿಗಳನ್ನು ಅನಗತ್ಯವಾಗಿ ಪ್ರಭಾರ, ನಿಯೋಜನೆ ಮಾಡಿ ಹಣ ವಸೂಲಿ ಮಾಡುವುದು, ಪೊಲೀಸ್ ಕೇಸ್ ದಾಖಲಿಸುವುದು ಮಾಡುವ ಜತೆಗೆ ಬೋಗಸ್ ಬಿಲ್ ಮಾಡಿ ಹಣ ನೀಡಲು ಸಹ ಕಿರುಕುಳ ನೀಡುತ್ತಿದ್ದಾರೆ. ಇಂಥ ಅಧಿಕಾರಿಗಳು ಸೇವೆಯಲ್ಲಿರಲು ಅರ್ಹರಲ್ಲ. ತಡ ಮಾಡದೇ ಕ್ರಮ ಜರುಗಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಪತ್ರಾಂಕಿತ ವ್ಯವಸ್ಥಾಪಕಿ ನಾಗಮಣಿ ಸೇರಿದಂತೆ ಇಲಾಖೆ ಹಲವು ಅಧಿಕಾರಿ, ಸಿಬ್ಬಂದಿ ಹಾಗೂ ಮುರಾರ್ಜಿ ದೇಸಾಯಿ ಶಾಲೆ ಪ್ರಾಂಶುಪಾಲರು ಇದ್ದರು. ದೂರಿನ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ರವಾನಿಸಿ ಗಮನ ಸೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net