

ಚನ್ನರಾಯಪಟ್ಟಣ: ವಕ್ಫ್ ಬೋರ್ಡ್ ಹಾಗೂ ರಾಜ್ಯ ಸರ್ಕಾರ ನಿರ್ಧಾರ ಖಂಡಿಸಿ ಚನ್ನರಾಯಪಟ್ಟಣದಲ್ಲಿ ತಾಲೂಕು ಬಿಜೆಪಿ ಘಟಕ, ರೈತ ಸಂಘ ಹಾಗೂ ಹಿಂದುಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಪ್ರತಿಭಟನಾಕಾರರು ಪಟ್ಟಣದ ಆಂಜನೇಯಸ್ವಾಮಿ ದೇವಾಲಯದಿಂದ ರಾಜ್ಯ ಸರ್ಕಾರ ಮತ್ತು ವಕ್ಫ್ ಮಂಡಳಿ ಹಾಗೂ ವಕ್ಫ್ ಸಚಿವ ಜಮೀರ್ ಅಹಮ್ಮದ್ ವಿರುದ್ಧ ಘೋಷಣೆ ಕೂಗುತ್ತಾ ಬಿ.ಎಂ.ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಕೆ.ಆರ್.ವೃತ್ತದ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ ಮಾತನಾಡಿ, ರೈತಪರ ಸರ್ಕಾರ ಎನ್ನುವ ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ರಾತ್ರೋ ರಾತ್ರಿ ರೈತರ ಭೂಮಿಯ ಪಹಣಿಯಲ್ಲಿ ವಕ್ಫ್ ಆಸ್ತಿಯೆಂದು ನಮೂದಿಸಲಾಗಿದೆ. ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್, ಸಿಎಂ ಸೂಚನೆ ಮೇರೆಗೆ ವಕ್ಫ್ ಆಸ್ತಿ ಘೋಷಿಸಲಾಗುತ್ತಿದೆ ಎನ್ನುವ ಅವರು ಹಾಗೂ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು. ರೈತರ ಪೌತಿ ಖಾತೆಯನ್ನು ತಿಂಗಳಾದರೂ ಮಾಡದ ಅಧಿಕಾರಿಗಳು ಒಂದು ರಾತ್ರಿಯಲ್ಲಿ ಪಹಣಿಯನ್ನು ವಕ್ಫ್ ಗೆ ಹಸ್ತಾಂತರಿಸುತ್ತಾರೆ. ಇದಕ್ಕೆಲ್ಲ ಸರ್ಕಾರದ ಕುಮ್ಮಕ್ಕು ಕಾರಣ. ರೈತರ ಹಿತ ಕಾಯುವ ನೈತಿಕತೆ ಇಲ್ಲದ ಸರ್ಕಾರ ರಾಜ್ಯದಲ್ಲಿ ಆಡಳಿತ ಮಾಡಲು ಅನರ್ಹರು. ಕೂಡಲೇ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಮಾಡಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ನಂಬಿಹಳ್ಳಿ ಮಾತನಾಡಿ, ಸಾವಿರಾರು ರೈತರ ಭೂಮಿ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿ ಆಲ್ಲಿನ ಜಿಲ್ಲಾಡಳಿತ ನೋಟಿಸ್ ನೀಡಿರುವುದು ಖಂಡನಾರ್ಹ ಎಂದರು.
ತಹಸೀಲ್ದಾರ್ ನವೀನ್‌ಕುಮಾರ್‌ಗೆ ಪ್ರತಿಭಟನಾಕಾರರು, ಮನವಿ ಸಲ್ಲಿಸಿ, ಚನ್ನರಾಯಪಟ್ಟಣದಲ್ಲಿನ ಕೆರೆಚಿಕ್ಕೇನಹಳ್ಳಿ ಗ್ರಾಮ ವ್ಯಾಪ್ತಿಯ ಸರ್ವೇ ನಂ. 19ರಲ್ಲಿನ 1.17 ಎಕರೆ ಭೂಮಿ ವಕ್ಫ್ ಬೋರ್ಡ್ ಎಂಬುದಾಗಿ ಋಣಭಾರ ಕಾಲಂನಲ್ಲಿ ನಮೂದಾಗಿದೆ. ಈ ಕೂಡಲೇ ಇದನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಪರಮ ಗಂಗಾದರ್, ಕಾರ್ಯದರ್ಶಿ ಧರಣಿ ನಾಗೇಶ್, ಮುಖಂಡರಾದ ನಂಜುಂಡ ಮೈಮ್, ಹರ್ಷವರ್ಧನ್, ರಾಘು, ರಂಗಣ್ಣ, ನಾಗರತ್ನ, ಮೀಸೆ ಮಂಜಣ್ಣ, ಸೇರಿ ಇತರರು ಇದ್ದರು.