

ಚಿಕ್ಕಮಗಳೂರು: ದೇಶದಲ್ಲಿ ಶೇ. ೮೦ ರಷ್ಟು ಹಿಂದುಗಳಿದ್ದಾರೆ. ಬಿಜೆಪಿಯವರು ಅವರಿಗಾದರೂ ಮೊದಲು ಒಳ್ಳೆಯದನ್ನು ಮಾಡಲಿ. ಆಗ ಯಾರು ನಿಮ್ಮನ್ನು ಅಧಿಕಾರದಿಂದ ಕೆಳಗೆ ಇಳಿಯಲು ಬಿಡುವುದಿಲ್ಲ. ಅದನ್ನು ಬಿಟ್ಟು ಮತಗಳ್ಳತನ ಮಾಡುವುದು ಸರಿಯಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬೆಳವಾಡಿ ಕೆರೆಗೆ ಬಾಗಿನ ಅರ್ಪಣೆ ಮಾಡಿ ಮಾತನಾಡಿದ ಅವರು, ಚುನಾವಣೆ ವೇಳೆ ನಾವು ಮಾಡಿದ ಸಾಧನೆ ಇಟ್ಟುಕೊಂಡು ರಾಜಕಾರಣ ಮಾಡಬೇಕು. ಅದನ್ನು ಬಿಟ್ಟು ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಯಾರೂ ತಾನೂ ಇದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡಿರುವುದಿಲ್ಲ ಎಂದು ಕಿಡಿಕಾರಿದ ಅವರು, ಇದೀಗ ಬಿಜೆಪಿ ಇನ್ನು ಒಂದು ಹೆಜ್ಜೆ ಮುಂದು ಹೋಗಿ ಮತಗಳ್ಳತನ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಸAವಿಧಾನಬದ್ಧವಾಗಿ ಮತದಾನದ ಹಕ್ಕು ನೀಡಲಾಗಿದೆ. ಆದರೆ ಮತವನ್ನು ಕಳವು ಮಾಡುವ ಕೆಲಸ ನಡೆಯುತ್ತಿರುವುದು ದುರಂತ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ಆರಂಭಿಸಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಜನರ ಸಮಸ್ಯೆ ಅರಿಯುವ ಕೆಲಸ ಮಾಡಿದ್ದರು. ಇದರ ಪರಿಣಾಮವಾಗಿಯೇ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹೀಗಾಗಿ ರಾಜ್ಯದ ಜನರಲ್ಲಿ ಆರ್ಥಿಕ ಬಲ ಬಂದಿದೆ. ಗ್ಯಾರಂಟಿ ಯೋಜನೆಗಳಿಂದಾಗಿಯೇ ಇಡೀ ದೇಶದಲ್ಲಿಯೇ ಕರ್ನಾಟಕ ತಲಾ ಆದಾಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಭದ್ರಕಾಡಾ ಅಧ್ಯಕ್ಷ ಡಾ.ಅಂಶುಮAತ್ ಮತ್ತಿತರರಿದ್ದರು.