

ಹೂವಿನಹಡಗಲಿ: ಜಗತ್ತನ್ನು ಸರಿ ದಾರಿಗೆ ತೆಗೆದುಕೊಂಡು ಹೋಗಬೇಕಾದರೆ ಭಾರತ ಶಕ್ತಿಯುತ ದೇಶವಾಗಬೇಕು ಎಂದು ಆರ್‌ಎಸ್‌ಎಸ್ ಬಳ್ಳಾರಿ ವಿಭಾಗ ವಕ್ತಾರ ಪಾಂಡುರಂಗ ಆಪ್ಟೆ ಹೇಳಿದರು.
ಪಟ್ಟಣದಲ್ಲಿ ಆರ್‌ಎಸ್‌ಎಸ್‌ನ ಸಂಘ ಶತಾಬ್ದಿ ಪಥಸಂಚಲನದ ಬಳಿಕ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಮಾರೋಪದಲ್ಲಿ ಮಾತನಾಡಿದರು.
ಮುಸ್ಲಿಮರ ದಾಳಿಯಿಂದ ಈಜಿಪ್ಟ್ ಸೇರಿದಂತೆ ಅನೇಕ ನಾಗರಿಕತೆಗಳು ಹಾಗೂ ರಾಷ್ಟ್ರಗಳಲ್ಲಿ ಸಂಸ್ಕೃತಿ ನಾಶವಾಗಿ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಮಯವಾಗಿವೆ. ದೇಶದಲ್ಲಿ ಹಿಂದುಗಳನ್ನು ತುಳಿಯಲು ಅನೇಕ ತಂತ್ರಗಳು ನಡೆದರೂ ಹಿಂದು ಧರ್ಮ ನಾಶವಾಗುವುದಿಲ್ಲ. ಜಗತ್ತು ಭಾರತ ಮಾತೆಗೆ ಜೈಕಾರ ಹೇಳಬೇಕು ಎಂಬುದಕ್ಕಾಗಿ ಸಂಘ ಕೆಲಸ ಮಾಡುತ್ತಿದೆ. ಸಾವಿರಾರು ವರ್ಷದ ಯುದ್ಧಗಳಿಂದ ನಾವು ಸೋತಿರಬಹುದು. ಆದರೆ ಮೃತ್ಯುಂಜಯ ಸಮಾಜದವರಾದ ನಮಗೆ ಸಾವಿಲ್ಲ. ಎಲ್ಲರಲ್ಲೂ ದೇವರಿದ್ದಾನೆ ಎಂದು ಹೇಳುವುದು ನಮ್ಮ ಧರ್ಮ. ಈ ದೇಶದಲ್ಲಿ ನಾಸ್ತಿಕರು ಇದ್ದಾರೆ. ಯಾವುದು ಜೀವನಕ್ಕೆ ಆಧಾರವಾಗಿರುತ್ತದೊ ಅದನ್ನು ನಾವು ಪೂಜಿಸುತ್ತಿದ್ದೇವೆ. ವೃಕ್ಷ, ನದಿ, ಕಲ್ಲು ಮಣ್ಣು ಎಲ್ಲವನ್ನೂ ಪೂಜಿಸಿ ದೇವರನ್ನು ಕಾಣುತ್ತೇವೆ ಎಂದರು.
ಹಿಂದುಗಳಾಗಿ ಹುಟ್ಟಿದ್ದಕ್ಕೆ ಅಭಿಮಾನವಿರಬೇಕು. ಹೊರರಾಷ್ಟ್ರಗಳಲ್ಲಿ ಅರ್ಧದಷ್ಟು ಜನ ಮಾನಸಿಕವಾಗಿ ಹಿಂದುಗಳಾಗಿದ್ದಾರೆ ಎಂಬುದನ್ನು ತತ್ವಜ್ಞಾನಿ ಹೇಳಿದ್ದಾರೆ. ಜಗತ್ತು ಹಿಂದುತ್ವವನ್ನು ಒಪ್ಪಿಕೊಳ್ಳುತ್ತಿದೆ. ಜಗತ್ತನ್ನು ಸರಿಯಾದ ದಾರಿಗೆ ತೆಗೆದುಕೊಂಡು ಹೋಗಬೇಕಾದರೆ ಭಾರತ ಶಕ್ತಿಯುತ ದೇಶವಾಗಬೇಕು. ಸಾಮಾನ್ಯ ಜನರೂ ಕೂಡ ಹಿಂದು ಧರ್ಮವನ್ನು ಅನುಸರಿಬೇಕು. ಒಡೆದು ಆಳ್ವಿಕೆ ಮಾಡಿದವರು ಬ್ರಿಟಿಷರು. ಅವರ ಸಂಸ್ಕೃತಿಯನ್ನು ನಾವು ಇನ್ನು ಆಚರಿಸುತ್ತಿದ್ದೇವೆ. ಸಂಘವನ್ನು ವಿರೋಧಿಸಿದ್ದ ನೆಹರು ಸಂಘವನ್ನು ಒಪ್ಪಿಕೊಂಡರು. ನಾವು ಯಾರನ್ನೂ ವಿರೋಧ ಮಾಡಿಲ್ಲ. ಅವರು ನಮ್ಮನ್ನು ವಿರೋಧ ಮಾಡುತ್ತಿದ್ದಾರೆ. ಪಂಚಪರಿವರ್ತನೆಗಳನ್ನು ನಾವು ಪಾಲನೆ ಮಾಡಬೇಕು ಎಂದರು.
ಎಸ್ಪಿ ಎಸ್.ಜಾಹ್ನ್ನವಿ ಸೂಕ್ತ ಬಂದೋಬಸ್ತ್ ಒದಗಿಸುವ ಮೂಲಕ ಹೆಚ್ಚಿನ ಸಿಬ್ಬಂದಿ ನೇಮಿಸಿದ್ದರು.
ಇದಕ್ಕೂ ಮೊದಲು ಪಟ್ಟಣದ ತಾಲೂಕು ಕ್ರೀಡಾಂಗಣದಿಂದ ಮದಲಗಟ್ಟಿವೃತ್ತ, ಅಂಬೇಡ್ಕರ್, ಶಾಸ್ತ್ರೀವೃತ್ತ ಸೇರಿದಂತೆ ಪ್ರಮುಖ ವೃತ್ತದ ಮೂಲಕ ಐದುನೂರಕ್ಕೂ ಹೆಚ್ಚು ಗಣವೇಷಧಾರಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.
ಭರತ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೃಷ್ಣನಾಯ್ಕ, ಪ್ರಮುಖರಾದ ಈಟಿ.ಲಿಂಗರಾಜ, ಎಂ.ಬಿ.ಬಸವರಾಜ, ಹಣ್ಣಿಶಶಿಧರ್ ಪುನೀತ್, ವಿನೋದ ಜಾಡರ್, ವೀರೇಶ, ಪಾಲಕ್ಷಪ್ಪ ಇತರರಿದ್ದರು.