

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಂದು ಸಂಘಟನೆಗಳ ನಾಯಕರು ಹಾಗೂ ಕಾರ್ಯಕರ್ತರ ಹತ್ಯೆ ಖಂಡಿಸಿ ಹುಬ್ಬಳ್ಳಿಯಲ್ಲಿ ಶುಕ್ರವಾರ ಹಿಂದು ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ವಿಎಚ್ಪಿ, ಬಜರಂಗದಳ ಸೇರಿ ವಿವಿಧ ಹಿಂದು ಪರ ಸಂಘಟನೆಗಳ ಪ್ರಮುಖರು ಇಲ್ಲಿಯ ಸ್ಟೇಷನ್ ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಹಿಂದುಗಳ ಮೇಲಿನ ದೌರ್ಜನ್ಯ, ಕಿರುಕುಳ ತಡೆಗಟ್ಟಿ ಎಂದು ಆಗ್ರಹಿಸಿದರು. ಪೋಲಿಸ್ ಆಯುಕ್ತ ಎನ್. ಶಶಿಕುಮಾರ ಮನವಿ ಸ್ವೀಕರಿಸಿದರು.
ಸ್ಟೇಷನ್ ರಸ್ತೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಪ್ರಮೋದ ಮುತಾಲಿಕ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಗಳನ್ನು ಮಾತ್ರ ಗುರಿಯಾಗಿಟ್ಟುಕೊಂಡು ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಇದು ರಾಜ್ಯದ ವಿವಿಧೆಡೆಯೂ ವಿಸ್ತಾರಗೊಂಡಿದೆ. ಇವೆಲ್ಲ ಕಾಂಗ್ರೆಸ್ ಪಕ್ಷದ ತುಷ್ಟೀಕರಣ ನೀತಿಯಿಂದಲೇ ನಡೆಯುತ್ತಿರುವುದು. ಮಧ್ಯರಾತ್ರಿ ಮನೆಯ ಕದ ತಟ್ಟಿ ಹಿಂದು ಕಾರ್ಯಕರ್ತರ ಭಾವಚಿತ್ರ ತೆಗೆಯುವುದು, ಹೆದರಿಸುವುದು ನಡೆಯುತ್ತಲೇ ಇದೆ. ಮುಂದಿನ ಗುರಿ ನೀನೇ ಎಂದು ಹಿಂದು ಕಾರ್ಯಕರ್ತರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗಡಿಪಾರಿಗೆ ಸಂಬಂಧಿಸಿದಂತೆ ಮುಸ್ಲಿಮ್ಗೆ ನೋಟಿಸ್ ನೀಡಿದ್ದಾರೆ. ನಿಜವಾದ ಮುಸ್ಲಿಮ್ ಗೂಂಡಾಗಳನ್ನು ಗಡಿಪಾರು ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಸ್ಥಾನಕ್ಕೆ ಮುಸ್ಲಿಮ್ು ರಾಜೀನಾಮೆ ನೀಡಿದ ಬಳಿಕ ಒತ್ತಡಕ್ಕೆ ಒಳಗಾದ ಕಾಂಗ್ರೆಸ್ ಸರ್ಕಾರ ಹಿಂದು ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರನ್ನು ಗಡಿಪಾರು ಮಾಡಲು ಮುಂದಾಗಿರುವುದು ಷಡ್ಯಂತ್ರವಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯನ್ನು ಭಯಮುಕ್ತಗೊಳಿಸಲು ನಿಷೇಧಿತ ಪಿಎಫ್ಐ ಕಾರ್ಯಕರ್ತರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಇಲ್ಲಿಯವರೆಗೆ ನಡೆದ ಕೊಲೆ, ಕೋಮು ಗಲಭೆ, ಪಿಎಫ್ಐ-ಎಸ್ಡಿಪಿಐ ಚಟುವಟಿಕೆಗಳನ್ನು ಎನ್ಐಎ ತನಿಖೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ವಿವಿಧ ಸಂಘಟನೆಗಳ ಪ್ರಮುಖರಾದ ಶಿವಾನಂದ ಸತ್ತಿಗೇರಿ, ಅಶೋಕ ಅಣ್ವೇಕರ, ವಿಶಾಲ ಜಾಧವ, ಮಲ್ಲಪ್ಪ ಶಿರಕೋಳ, ಇತರರು ಇದ್ದರು.