

ಮೈಸೂರು: ಬಾಂಗ್ಲಾದೇಶದಲ್ಲಿ ನಡೆದ ಹಿಂದುಗಳ ಮೇಲೆ ದೌರ್ಜನ್ಯ ಖಂಡಿಸಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಪಂಜಿನ ಮೆರವಣಿಗೆ ಶನಿವಾರ ನಡೆಸಿದರು.
ನಗರದ ಗಾಂಧಿ ವೃತ್ತದಿಂದ ಪ್ರಾರಂಭವಾದ ಮೆರವಣಿಗೆಯು ಪ್ರಭಾ ಚಿತ್ರಮಂದಿರ, ಕೆ.ಟಿ.ಸ್ಟ್ರೀಟ್ ಮೂಲಕ ಸಾಗಿ ಭೈರವ ದೇವಸ್ಥಾನದಲ್ಲಿ ಕೊನೆಯಾಯಿತು.
ಪಕ್ಷದ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಹಲ್ಲೆ, ಮಹಿಳೆಯರ ಮೇಲಿನ ದೌರ್ಜನ್ಯ, ಮಕ್ಕಳ ಮೇಲೆ ದಬ್ಬಾಳಿಕೆ ನಡೆಯುತ್ತಿರುವುದು ಖಂಡನೀಯ.
ಅಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳಿಗೆ ಆತ್ಮಸ್ಥೈರ್ಯ ತುಂಬಬೇಕಾಗಿದೆ. ಹಿಂದುಗಳ ರಕ್ಷಣೆ ಮಾಡುವುದು ನಮ್ಮ ಧರ್ಮ. ಪ್ರಧಾನಿ ನರೇಂದ್ರ ಮೋದಿ ಅವರು ಇಂಥ ಕೃತ್ಯವನ್ನು ಸಹಿಸುವುದಿಲ್ಲ. ತಕ್ಷಣ ಅಲ್ಲಿನ ಹಿಂದುಗಳ ರಕ್ಷಣೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಯುವ ಮೋರ್ಚಾ ನಗರಾಧ್ಯಕ್ಷ ರಾಕೇಶ್ ಗೌಡ, ಉಪಾಧ್ಯಕ್ಷರಾದ ಜೋಗಿ ಮಂಜು, ಹೇಮಾ ನಂದೀಶ್, ಎಸ್.ಕೆ.ದಿನೇಶ್, ಪಾಲಿಕೆ ಮಾಜಿ ಸದಸ್ಯರಾದ ಕೆ.ಜಿ.ರಮೇಶ್, ನಗರ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಮುಖಂಡರಾದ ಡಿ.ಲೋಹಿತ್, ಸಚಿನ್, ಮನುಶೈವ, ಚೇತನ್ ಇತರರು ಇದ್ದರು.