ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವವರ ಗೆಲ್ಲಿಸಬೇಡಿ

0301
Published on

ಕಡೋಲಿ: ಹಿಂದು ತಾಯಿಯಿಂದ ಜನ್ಮ ಪಡೆದ ಜಾರಕಿಹೊಳಿ ಹಿಂದು ಪದದ ಅರ್ಥ ಅಶ್ಲೀಲ ಎಂದು ಹೇಳುತ್ತಾರೆ. ಜನ್ಮ ಪ್ರಮಾಣ ಪತ್ರದಲ್ಲಿ ತಮ್ಮ ಧರ್ಮವನ್ನು ಹಿಂದು ಎಂದು ಏಕೆ ನಮೂದಿಸಿದ್ದಾರೆ ಎಂದು ಹಿಂದು ರಾಷ್ಟ್ರ ಸೇನೆ ಅಧ್ಯ ಧನಂಜಯ ದೇಸಾಯಿ ವಾಗ್ದಾಳಿ ನಡೆಸಿದರು.

ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಶಿವಾಜಿ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಜಾಗೋ ಹಿಂದು ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಸತೀಶ ಜಾರಕಿಹೊಳಿ ಅವರ ಜನ್ಮದಿಂದಲೇ ಅವರ ಬಗ್ಗೆ ಅಧ್ಯಯನ ಮಾಡಲು ಕರ್ನಾಟಕ ಸರ್ಕಾರ ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ ತನಿಖಾ ಸಮಿತಿ ರಚಿಸಬೇಕು. ಕರ್ನಾಟಕದಲ್ಲಿ ಹುಟ್ಟಿದ ಅವರು ಅರಬ್​ ದೇಶಗಳನ್ನು ಹೊಗಳುವುದರಲ್ಲಿ ನಿರತರಾಗಿದ್ದಾರೆ. ಕರ್ನಾಟಕದ ಹಿಂದುಗಳು ರಾಜಾಸಿಂಗ್​ ಠಾಕೂರ್​ ಅಂತವರನ್ನು ವಿಧಾನಸಭೆಗೆ ಆಯ್ಕೆ ಮಾಡಬೇಕು.

ಆದರೆ, ಹಿಂದುಗಳ ಬಗ್ಗೆ ಹಗುರವಾಗಿ ಮಾತನಾಡುವವರನ್ನು ಆಯ್ಕೆ ಮಾಡಬಾರದು ಎಂದರು. ರಾಹುಲ್​ ಗಾಂಧಿ ಭಾರತ್​ ಜೋಡೋ ರ್ಯಾಲಿ ಮಾಡುತ್ತಿಲ್ಲ. ಭಾರತ್​ ತೋಡೋ ಮಾಡುತ್ತಿದ್ದಾರೆ ಎಂದು ದೂರಿದರು. ಹುಕ್ಕೇರಿ ತಾಲೂಕಿನ ಕ್ಯಾರಗುಡ್ಡದ ಶ್ರೀ ಅಭಿನವ ಮಂಜುನಾಥ ಮಹಾರಾಜರು, ಮಹಾರಾಷ್ಟ್ರದ ಯೋಗಿಶ್ರೀ ಬಾಲ ಮಹಾರಾಜರು ಮಾತನಾಡಿದರು. ಬಿಜೆಪಿ ಮುಖಂಡರಾದ ರವಿ ಹಂಜಿ, ಬಸವರಾಜ ಹುಂದ್ರಿ, ಮಾರುತಿ ಅಷ್ಟಗಿ, ಪೃಥ್ವಿ ಕತ್ತಿ, ಕಲಗೌಡ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net