ಹಿಂದುಗಳ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ಅಕ್ಷಮ್ಯ

Dr.Sudha Halakai
Published on

ಕಲಬುರಗಿ: ಹಿಂದುಗಳು ಹಿಂಸಾವಾದಿಗಳು, ದ್ವೇಷ ಹಬ್ಬಿಸುತ್ತಿರುವವರು ಎಂಬ ಕಾಂಗ್ರೆಸ್ ನಾಯಕ, ಲೋಕಸಭೆ ಪ್ರತಿ ಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆ ಇಡೀ ಹಿಂದು ಸಮಾಜಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ಮಾಧ್ಯಮ ವಕ್ತಾರೆ ಡಾ.ಸುಧಾ ಹಾಲಕಾಯಿ ಖಂಡಿಸಿದರು.
ಬಿಜೆಪಿ, ಆರ್‌ಎಸ್‌ಎಸ್‌ನ್ನು ಟೀಕಿಸಲಿ, ಸಿದ್ಧಾಂತವನ್ನು ವಿಮರ್ಶೆ ಮಾಡಲಿ. ಆದರೆ ಇಡೀ ಹಿಂದು ಸಮಾಜಕ್ಕೆ ಕಳಂಕ ತರುವಂತ ಹೇಳಿಕೆ ನೀಡಿರುವುದು ಅವರ ಸ್ಥಾನಕ್ಕೆ ಗೌರವ ತರುವಂತದ್ದು ಅಲ್ಲ. ಕೂಡಲೇ ಅವರು ಹಿಂದು ಸಮಾಜದ ಕ್ಷಮೆ ಕೇಳಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ದೇಶದಲ್ಲಿ ಮುಂಬೈ, ಸಂಸತ್, ವೈಷ್ಣೋದೇವಿ ಯಾತ್ರಿಕರ ಮೇಲೆ ಭಯೋತ್ಪಾದನಾ ದಾಳಿ ಮಾಡಿದವರು ಯಾರು ಎಂಬುದನ್ನು ಹಿಂಸೆ, ದ್ವೇಷ ಎನ್ನುವ ರಾಹುಲ್ ಗಾಂಧಿ ಹೇಳಿಕೆ ನೀಡಲಿ. ೨೧ ತಿಂಗಳು ಸಂವಿಧಾನವನ್ನೇ ಅಮಾನತ್ತಿನಲ್ಲಿಟ್ಟಿದ್ದ ಬಗ್ಗೆ ಮಾತನಾಡಲಿ. ೧೯೮೪ರಲ್ಲಿ ಮೂರು ಸಾವಿರ ಸಿಖ್ಖರನ್ನು ಕೊಲೈಗೈದ ಬಗ್ಗೆ, ಕಾಶ್ಮೀರದ ಪಂಡಿತರ ಮಾರಣ ಹೋಮದ ಬಗ್ಗೆ ಬಾಯಿ ಬಿಚ್ಚಲಿ ಎಂದು ವಾಗ್ದಾಳಿ ನಡೆಸಿದರು.
ತಮಿಳುನಾಡಿ ಸಿಎಂ ಪುತ್ರ ಸ್ಟಾಲಿನ್ ಸನಾತನ ಧರ್ಮ ಸರ್ವನಾಶ ಮಾಡುತ್ತೇವೆ ಎಂದ, ಕೇರಳದಲ್ಲಿ ಮುಸ್ಲಿಂ ಲೀಗ್‌ನವರು ಹಿಂದುಗಳ ರುಂಡ ಕತ್ತರಿಸುತ್ತೇವೆ ಎಂದವರ ಬಗ್ಗೆ ಮಾತನಾಡಲಿ. ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತಂದ ಬಗ್ಗೆ ಸ್ಪಷ್ಟನೆ ನೀಡಲಿ. ತುರ್ತು ಪರಿಸ್ಥಿತಿ ಹೇರಿ ೧.೪೦ ಲಕ್ಷ ಜನರನ್ನು ಜೈಲಗೆ ಅಟ್ಟಿದ್ದು, ದ್ವೇಷ, ಹಿಂಸಾ ರಾಜಕಾರಣ ಎಂದು ಹೇಳಿದರು.
ಪ್ರಮುಖರಾದ ಗಿರಿರಾಜ ಯಳಮೇಲಿ, ರಾಜುಗೌಡ ನಾಗನಳ್ಳಿ, ಸ್ವಪ್ನಾ ಮಂಗಲಗಿ, ಪುಷ್ಪಲತಾ, ಅನೀಲ ಸಿನ್ನೂರಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net