ಹಿಂದುಗಳ ಪರಾಕ್ರಮ ಪ್ರದರ್ಶನ ಅಗತ್ಯ

5Manju8
ಬೆಳಗಾವಿ ವಿಶ್ವ ಹಿಂದು ಪರಿಷತ್ ಕಾರ್ಯಾಲಯದ ಸಮರಸನಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಗೋಪಾಲ ನಾಗರಕಟ್ಟೆ ಮಾತನಾಡಿದರು. ಕೃಷ್ಣ ಭಟ್ ಇತರರಿದ್ದರು.
Published on

ಬೆಳಗಾವಿ: ಹಿಂದು ಸಮಾಜದಲ್ಲಿ ಪರಾಕ್ರಮವನ್ನು ಜಾಗೃತಗೊಳಿಸುವುದು ಅವಶ್ಯಕವಾಗಿದ್ದು, ಪ್ರತಿಯೊಬ್ಬ ಹಿಂದುವೂ ಪರಾಕ್ರಮ ಪ್ರದರ್ಶನಕ್ಕೆ ಸಿದ್ಧವಾಗಬೇಕು ಎಂದು ವಿಶ್ವ ಹಿಂದು ಪರಿಷತ್ ಮುಖಂಡ ಹಾಗೂ ಆಯೋಧ್ಯೆಯ ರಾಮಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ್ ನಾಗರಕಟ್ಟೆ ಹೇಳಿದರು.

ಇಲ್ಲಿನ ಶಾಸ್ತ್ರಿ ನಗರದ ವಿಶ್ವ ಹಿಂದು ಪರಿಷದ್ ಕಾರ್ಯಾಲಯದ ಸಮರಸನಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರ, ಪೊಲೀಸರು, ಸೈನಿಕರಿಂದ ಮಾತ್ರ ಹಿಂದು ಧರ್ಮದ ರಕ್ಷಣೆ ಸಾಧ್ಯವಿಲ್ಲ. ಸಮಾಜದಲ್ಲಿ ಪರಾಕ್ರಮ ಜಾಗೃತಿ ಆಗಬೇಕು. ಪರಾಕ್ರಮದಿಂದಲೇ ಹಿಂದು ಸಂಸ್ಕೃತಿ ಉಳಿಸಬೇಕಾಗಿದೆ. ಹಿಂದುಗಳ ಸ್ವಾಭಿಮಾನ ಹೆಚ್ಚಾಗಬೇಕು ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ಮುಖ್ಯವಾಗಿರುವುದೇ ಪರಾಕ್ರಮ. ಕೆಲವು ವರ್ಷಗಳ ಕಾಲ ಶಾಂತಿ, ಶಾಂತಿ ಎಂದು ಕೆಲವರು ಹೇಳಿದರು. ಈಗ ಕಾಲ ಬದಲಾಗಿದ್ದು, ಪರಾಕ್ರಮ ತೋರಿಸುವುದು ಅನಿವಾರ್ಯವಾಗಿದೆ. ಯಾರಿಗೆ ಪರಾಕ್ರಮ ತೋರಲು ಧೈರ್ಯ ಇರುವುದಿಲ್ಲವೋ ಅವರು ಶಿವಾಜಿ ಫೋಟೋ ಹಾಕಲು ಅರ್ನಹರು. ಹಿಂದು ಕಾರ್ಯಕರ್ತರು ಯಾವತ್ತೂ ಪೊಲೀಸ್ ಕೇಸ್‌ಗಳಿಗೆ ಹೆದರಬಾರದು ಎಂದರು. ನಾವು ರಾವಣ, ಸದ್ಧಾಂ ಹುಸೇನ್ ತರಹ ಆಗಬೇಕಿಲ್ಲ. ರಾಮ, ಶಿವಾಜಿಯ ಹಾಗೆ ಸದ್ಗುಣ ಸಂಪನ್ನರಾಗಿರುವ ಪರಾಕ್ರಮಿಗಳಾಗಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಹಿಂದು ಸಮಾಜದ ಉನ್ನತಿಗೆ ನಾವೆಲ್ಲ ಹೋರಾಡಬೇಕು ಎಂದರು. ಕೃಷ್ಣ ಭಟ್ ಇತರರಿದ್ದರು.

ಆರ್‌ಎಸ್‌ಎಸ್ ನಿಷೇಧ ಸಾಧ್ಯವಿಲ್ಲ: ದೇಶದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ( ಆರ್‌ಎಸ್‌ಎಸ್) ಬ್ಯಾನ್ ಮಾಡುವುದು ಕೇವಲ ಕನಸು ಅಷ್ಟೇ. ಇಂಥ ಪ್ರಯತ್ನಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ಅವು ತಾತ್ಕಾಲಿಕ ಅಷ್ಟೇ. ಸೂರ್ಯನ ಕಿರಣ ತಡೆಯಲು ಆಗಾಗ ಗ್ರಹಣ ಬರುತ್ತದೆ. ಹಾಗೇ ಆರ್‌ಎಸ್‌ಎಸ್ ನಿಷೇಧ ಬಗ್ಗೆ ಪ್ರಯತ್ನಗಳು ಮೇಲಿಂದ ಮೇಲೆ ಬರುತ್ತವೆ. ಆರ್‌ಎಸ್‌ಎಸ್ ಶ್ರೇಷ್ಠ ಕಾರ್ಯಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net