ಹಿಂದುಗಳ ನರಮೇಧ ಸಹಿಸಲ್ಲ

Hindu
Published on

ಚಿತ್ರದುರ್ಗ: ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ಹಲ್ಲೆ, ಹಿಂಸಾಚಾರ ನಡೆಸಿ ನರಮೇಧಕ್ಕೆ ಮುಂದಾಗಿರುವುದನ್ನು ಭಾರತ ಸಹಿಸುವುದಿಲ್ಲ. ಇದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಹಿಂದು ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಾಂಗ್ಲಾ ದೇಶದ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಹಿಂದುಗಳಿಗೆ ಇರುವುದೊಂದೆ ಭಾರತ, ನಮ್ಮ ಸಹೋದರ-ಸಹೋದರಿಯರಿಗೆ ಧೈರ್ಯ ತುಂಬೋಣ, ಧೃತಿಗೆಡಬೇಡಿ ನಿಮ್ಮೊಂದಿಗೆ ನಾವಿದ್ದೇವೆ, ಎದ್ದೇಳೆ ಚಿರನಿದ್ರೆ ಸಾಕು, ವಿಶ್ವಸಂಸ್ಥೆ ಕೂಡಲೇ ಮಧ್ಯಪ್ರವೇಶಿಸಿ ಹಿಂದುಗಳನ್ನು ರಕ್ಷಿಸಲಿ, ಅಂದು ಪಾಕಿಸ್ತಾನದಲ್ಲಿ ಹಿಂದುಗಳ ಹತ್ಯಾಕಾಂಡ-ಇಂದು ಬಾಂಗ್ಲಾದಲ್ಲಿ ನರಮೇಧ ಎಚ್ಚರ ಹಿಂದುಗಳೇ ಎಚ್ಚರ… ಸೇರಿ ಇನ್ನಿತರೆ ನಾಮಫಲಕ ಕೈಯಲ್ಲಿಡಿದು ಘೋಷಣೆ ಕೂಗಿದರು.

ಬಜರಂಗದಳದ ರಾಜ್ಯ ದಕ್ಷಿಣ ಪ್ರಾಂತ ಸಹ ಸಂಯೋಜಕ ಪ್ರಭಂಜನ್ ಮಾತನಾಡಿ, ಬಾಂಗ್ಲಾದಲ್ಲಿನ ಹಿಂದುಗಳ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ಅತ್ಯಂತ ಖಂಡನೀಯ. ರಕ್ಷಣೆಗಾಗಿ ರಾಷ್ಟ್ರಪತಿ, ಪ್ರಧಾನಿ ಅವರಿಗೂ ಒತ್ತಾಯಿಸಿದ್ದೇವೆ. ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದೇವೆ ಎಂದರು.

ನಮ್ಮವರ ವಿರುದ್ಧ ದೌರ್ಜನ್ಯ ನಡೆದರೆ, ವಿಶ್ವಾದ್ಯಂತ ಹಿಂದುಗಳೆಲ್ಲರಿಗೂ ಗೊತ್ತಾಗಿ ಮೊದಲು ನಾವೆಲ್ಲರೂ ಒಗ್ಗೂಡಬೇಕು. ಅದಕ್ಕಾಗಿ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು, ಧೈರ್ಯ ತುಂಬುವ ಕೆಲಸ ಮಾಡುವುದರ ಜೊತೆಗೆ ಎಚ್ಚರಿಕೆ ನೀಡುತ್ತಿದ್ದೇವೆ. ಹಿಂದುಗಳು ಧೃತಿಗೆಡುವ ಅಗತ್ಯವಿಲ್ಲ ಎಂದು ಹೇಳಿದರು.

ಮುಖಂಡ ದೇವರಾಜ್ ಕೋಟ್ಲಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದ ಪ್ರಧಾನಿಗೆ ಈಗಾಗಲೇ ಎಚ್ಚರಿಕೆ ಕೊಟ್ಟಿದ್ದಾರೆ. ವಿಶ್ವಸಂಸ್ಥೆ ಮಧ್ಯ ಪ್ರವೇಶಕ್ಕೂ ಒತ್ತಾಯಿಸಿದ್ದಾರೆ. ಯಾವುದೇ ದೇಶದಲ್ಲಿ ಹಿಂದುಗಳಿಗೆ ತೊಂದರೆ ಕೊಟ್ಟರೆ, ಭಾರತ ಸುಮ್ಮನಿರುವುದಿಲ್ಲ. ಸಹಿಸುವುದೂ ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದರು.

ಆರ್‌ಎಸ್‌ಎಸ್, ಬಜರಂಗದಳ, ವಿಶ್ವ ಹಿಂದು ಪರಿಷತ್, ಬಿಜೆಪಿಯ ಕಾರ್ಯಕರ್ತರು ಪಾಲ್ಗೊಂಡು ಬಾಂಗ್ಲಾ ದೇಶದ ಪ್ರಧಾನಿ ವಿರುದ್ಧ ಆಕ್ರೋಶ ಹೊರಹಾಕಿದರು.

ಸಂಸದ ಗೋವಿಂದ ಎಂ. ಕಾರಜೋಳ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ನಗರಸಭೆ ಸದಸ್ಯರಾದ ಶ್ರೀನಿವಾಸ್, ಸುರೇಶ್, ಅನುರಾಧಾ, ಮುಖಂಡರಾದ ಸುರೇಶ್ ಸಿದ್ಧಾಪುರ, ವೆಂಕಟೇಶ್ ಯಾದವ್, ಭಾರ್ಗವಿ ದ್ರಾವಿಡ್, ನವೀನ್ ಚಾಲುಕ್ಯ, ದಗ್ಗೆ-ಶಿವಪ್ರಕಾಶ್, ರುದ್ರೇಶ್, ರವಿ, ಚಂದ್ರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net