ಹಿಂದುಗಳ ಒಳಜಗಳದಿಂದ ದೇಶದ್ರೋಹಿಗಳ ಉಪಟಳ, ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಬೇಸರ,  ‘ಬಯಲಾಗೋಣ ಬಲವಾಗೋಣ’ ಕಾರ್ಯಕ್ರಮ

11-Manjunath-HSK-02
Published on

ಹೊಸಕೋಟೆ: ಭಾರತದ ಬಹುಸಂಖ್ಯಾತ ಹಿಂದುಗಳು ಜಾತಿ, ಉಪಜಾತಿಯ ಹೆಸರಿನಲ್ಲಿ ಒಳಜಗಳ ಮಾಡಿಕೊಳ್ಳುತ್ತಿರುವ ಪರಿಣಾಮ ದೇಶದಲ್ಲಿ ದೇಶದ್ರೋಹಿಗಳ ಉಪಟಳ ಹೆಚ್ಚಾಗುತ್ತಿದೆ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ, ಖ್ಯಾತ ವಾಗ್ಮಿ ಹಾಗೂ ಚಿಂತಕರಾದ ಚಕ್ರವರ್ತಿ ಸೂಲಿಬೆಲೆ ಬೇಸರ ವ್ಯಕ್ತಪಡಿಸಿದರು.

ನಗರದ ವಿವೇಕಾನಂದ ವಿದ್ಯಾಕೇಂದ್ರದಲ್ಲಿ ಯುವಾ ಬ್ರಿಗೇಡ್‌ನಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ‘ಬಯಲಾಗೋಣ ಬಲವಾಗೋಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸುವ ಜನರು ದೇಶದಲ್ಲಿರುವುದು ದುರದೃಷ್ಟಕರ. ಇಂಥವರ ಬಗ್ಗೆ ಬುದ್ಧಿಜೀವಿಗಳು ಚಕಾರ ಎತ್ತದಿರುವುದು ಏಕೆ ಎಂದು ಪ್ರಶ್ನಿಸಿದರು.

ಅನೇಕ ವರ್ಷಗಳಿಂದ ಒಂದು ವರ್ಗದ ಹಿಂದುಗಳನ್ನು ಹೊರಗಿಟ್ಟ ಕಾರಣ ದೇಶದಲ್ಲಿ ಮತಾಂತರ ಹೆಚ್ಚಾಗುತ್ತಿದೆ. ಅದನ್ನು ತಡೆಯಬೇಕು. ಇದಕ್ಕಾಗಿ ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.

ಪ್ರಪಂಚದ ಯಾವುದೇ ಭಾಗದಲ್ಲಿ ಹಿಂದುಗಳು ಯಾರನ್ನೂ ಮತಾಂತರ ಮಾಡಿಲ್ಲ. ಅದರೆ, ಮನಃಪರಿವರ್ತನೆಯ ಕಾರ್ಯವನ್ನು ಮಾತ್ರ ಮಾಡಿದ್ದಾರೆ. ಇನ್ನಾದರೂ ಹಿಂದುಗಳು ಎಚ್ಚೆತ್ತುಕೊಂಡು ಒಂದಾಗದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಸ್ಯೆ ಎದುರಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಸವ ಕಲ್ಯಾಣ ಮಠದ ಶ್ರೀ ಮಹದೇವ ಸ್ವಾಮೀಜಿ ಮಾತನಾಡಿ, ಯುವಾ ಬ್ರಿಗೇಡ್ ಕಾರ್ಯಕರ್ತರು ರಾಜ್ಯದಲ್ಲಿ ನೂರಾರು ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿರುವುದಲ್ಲದೆ, ಹಳೇ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ ಜನರಿಗೆ ಹತ್ತಿರವಾಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಸಾಯಿ ಮಂಜುನಾಥ ಸ್ವಾಮೀಜಿ, ಶಾಲೆಯ ಕಾರ್ಯದರ್ಶಿ ನಾಗರಾಜ ಗುಪ್ತ, ಯುವಾ ಬ್ರಿಗೇಡ್ ಸಂಚಾಲಕ ಧರ್ಮ ಹುನ್ನಾರಿ, ತಾಲೂಕು ಸಂಚಾಲಕ ಆನಂದ ಮರೀಗೌಡ, ಮುಖಂಡರಾದ ಡಾ.ಸಿ.ಜಯರಾಜ್, ಮುನಿಶಾಮಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net