

ಹಿರೀಸಾವೆ: ಹಿಂದು ದೇಗುಲಗಳ ಜಾಗ, ಸ್ಮಶಾನ ಹಾಗೂ ರೈತರ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ರಾತ್ರೋ ರಾತ್ರಿ ತಿದ್ದುಪಡಿ ಮಾಡಿ ನೋಟಿಸ್ ನೀಡಿರುವುದು ಖಂಡನೀಯ ಎಂದು ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಡಾ.ಶ್ರೀಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಹೋಬಳಿಯ ಕರಿಕ್ಯಾತನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದಕ್ಕೆಲ್ಲ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವೈಫಲ್ಯವೇ ಕಾರಣ. ಹಿಂದು ವಿರೋಧಿ ಚಟುವಟಿಕೆ ಮಾಡುವುದರಿಂದ ವಿನಾಶ ಕಟ್ಟಿಟ್ಟ ಬುತ್ತಿ ಎಂದು ಶಕುನ ನುಡಿದರು.
ಉತ್ತರ ಕರ್ನಾಟಕದ ಒಂದೇ ಹಳ್ಳಿಯ 1200 ಎಕರೆ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಹಟ್ಟೂರಲ್ಲಿ ಒಂದೂವರೆ ಎಕರೆ, ಇನ್ನು ನಮ್ಮ ಚನ್ನರಾಯಪಟ್ಟಣದ ಹಿಂದು ಸ್ಮಶಾನ ಸೇರಿದಂತೆ ರಾಜ್ಯದೆಲ್ಲಡೆ ಬಹುತೇಕ ಹಿಂದು ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಅಕ್ರಮವಾಗಿ ಪರಿಗಣಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಗುಡುಗಿದರು.
ರೈತರು ಪಹಣಿ ತೆಗೆಸಲು ಹೋದರೆ ಸರ್ವರ್ ಇಲ್ಲ. ಬಡವರು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿದರೆ ಬೆರಳಚ್ಚು ನೀಡಲು ಸರ್ವರ್ ಸಮಸ್ಯೆ. ಆದರೆ ರಾಜ್ಯದೆಲ್ಲೆಡೆ ಇಷ್ಟೊಂದು ಆಸ್ತಿಯನ್ನು ಒಮ್ಮೆಲೆ ಅಕ್ರಮವಾಗಿ ವಕ್ಫ್‌ಗೆ ಸೇರಿಸಲು ಯಾವ ತೊಂದರೆಯಾಗಲಿಲ್ಲವೇ? ಎಂದು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದರು.
ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯುವುದರ ಜತೆಗೆ ದಾಖಲಾತಿಗಳನ್ನು ತಿದ್ದುಪಡಿ ಮಾಡಲಾಗುವುದು ಎಂದು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಆದರೆ ಅದು ಸಾಲದು. ಈ ಎಲ್ಲ ಆಸ್ತಿಗಳ ಮೇಲೆ ವಕ್ಫ್‌ಗೆ ಈ ಮುಂದೆಯೂ ಯಾವುದೇ ಹಕ್ಕು ಮತ್ತು ಅಧಿಕಾರ ಇರುವುದಿಲ್ಲ ಎಂದು ಅಧಿಕೃತ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ದೇಗುಲಗಳಿಗೆ, ಸ್ಮಶಾನಗಳಿಗೆ ಹಾಗೂ ಆಯಾ ರೈತರ ಹೆಸರಿನಲ್ಲಿ ಅಧಿಕೃತ ಸ್ವತ್ತು ಪತ್ರಗಳನ್ನು ತಕ್ಷಣವೇ ವಿತರಿಸಬೇಕು. ಇಲ್ಲವಾದಲ್ಲಿ ರಾಜ್ಯವಷ್ಟೇ ಅಲ್ಲ ದೇಶದ ಹಿಂದು ಸಮುದಾಯ ಒಗ್ಗೂಡಿ ಹಿಂದು ಧರ್ಮದ ಮೇಲೆ ಅತಿಕ್ರಮಣ ಮಾಡುತ್ತಿರುವವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.
ಈಗಾಗಲೇ ತೆರೆಮರೆಯಲ್ಲಿ ನಡೆದಿರುವ ಅಚಾತುರ್ಯವನ್ನು ತಕ್ಷಣ ಸರಿಪಡಿಸದಿದ್ದರೆ ರೈತರೊಂದಿಗೆ ಬೀದಿಗಿಳಿದು ಉಗ್ರ ಹೋರಾಟ ಕೈಗೊಳಬೇಕಾಗುತ್ತದೆ ಎಂದು ಎಚ್ಚರಿಸಿದರು.