ಹಿಂದು ಸಮಾಜ ಒಂದಾಗಲಿ

kpp guru
ಕೊಪ್ಪ ತಾಲೂಕಿನ ಹರಿಹರಪುರ ಮಠದಲ್ಲಿ ಶ್ರೀ ಮಾತಂಗ ಪೀಠಾಧ್ಯಕ್ಷರಾಗಿ ಮಾತಂಗನಾಂದ ಗಿರಿ ಸ್ವಾಮೀಜಿ ಗುರುದೀಕ್ಷೆ ಪಡೆದರು.
Published on

ಕೊಪ್ಪ: ಜಗತ್ತಿನ ಅತ್ಯಂತ ಪರಿಪೂರ್ಣ ಸಂಸ್ಕೃತಿಯಲ್ಲಿ ಭಾರತೀಯ ಸಂಸ್ಕೃತಿಯೂ ಒಂದು. ನಮ್ಮ ಸಂಸ್ಕೃತಿ ಏಕ ವ್ಯಕ್ತಿಯ ಉಪದೇಶದ ಮೇಲೆ ನಿಂತಿಲ್ಲ. ಹುಟ್ಟಿನಿಂದ ಅಳೆಯುವ ಪದ್ಧತಿ ನಮ್ಮದಲ್ಲ. ಆದರೆ ಹುಟ್ಟಿನಿಂದ ಜಾತಿ ವ್ಯವಸ್ಥೆ ಕಾಣುವ ಅರ್ಥಹೀನ ಸ್ಥಿತಿ ಕಾಣುತ್ತಿದ್ದೇವೆ ಎಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಹರಿಹರಪುರ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುದೀಕ್ಷಾ ಪಟ್ಟಾಭಿಷೇಕದಲ್ಲಿ ಆಶೀರ್ವಚನ ನೀಡಿದ ಅವರು, ಸಮಾಜ ಒಂದಾಗಬೇಕು, ಪ್ರತಿಯೊಬ್ಬರೂ ಹೃದಯದಿಂದ ಒಂದಾಗಬೇಕು. ಜಾತಿ, ಧರ್ಮ, ವರ್ಗ ಯಾವುದೇ ಅಡ್ಡಿಯಾಗಬಾರದು. ಸಮಾಜ ಒಂದಾಗಿ ಕೆಲಸ ಮಾಡಬೇಕು. ಸಂತರು ಒಂದಾದರೇ ಸಮಾಜ ಒಂದಾದ ಹಾಗೆ. ಈ ನಿಟ್ಟಿನಲ್ಲಿ ನಾವು ಒಂದಾಗಿದ್ದೇವೆ. ಎಲ್ಲಿಯೂ ಪ್ರಚಾರ ಮಾಡದೆ ಸುಮಾರು 8 ಸಂತರು ಒಂದಾಗಿದ್ದೇವೆ ಎಂದು ತಿಳಿಸಿದರು.

ಮಾತಂಗ ಸಮುದಾಯ ಕಾಲ ವೈಪರೀತ್ಯಕ್ಕೆ ಸಿಲುಕಿ ಬಳಲಿದೆ. ಆ ಸಮುದಾಯದ ಮಹತ್ವ ಮತ್ತೊಮ್ಮೆ ಪ್ರಪಂಚಕ್ಕೆ ಸಾರಬೇಕಿದೆ. ಮಾದಿಗ ಸಮುದಾಯಕ್ಕೆ ಮಾತಂಗಿ ದೇವಿಯು ದೈವಿಯಾಗಿದ್ದಾಳೆ. ನೂಕುಲ ರವೀಂದ್ರ ಅವರು 13 ವರ್ಷಗಳಿಂದ ಮಾರ್ಗದರ್ಶನ ಪಡೆದು, ಅಧ್ಯಾತ್ಮ ಸಾಧನೆ, ಮಾತಂಗ ಗಿರಿಯಲ್ಲಿ ಸ್ವಾಮೀಜಿಯಾಗಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಮ ಸಮಾಜ ನಿರ್ಮಾಣದ ಕಾರ್ಯ ಮಾಡಬೇಕಿದೆ ಎಂದು ತಿಳಿಸಿದರು.

ಶೃಂಗೇರಿ ಕ್ಷೇತ್ರದ ಹಿರಿಯ ರಾಜಕಾರಣಿ ಕೆ.ಎಂ.ಗೋಪಾಲ್ ಮಾತನಾಡಿ, ಹಿಂದಿನ ಕಾಲದಲ್ಲಿ ಇದ್ದಂಥ ಜಾತಿ ತಾರತಮ್ಯ ಇಂದಿಲ್ಲ. ಬದಲಾವಣೆಗೆ ನಾವು ಸಹ ಕೈಜೋಡಿಸಬೇಕಾಗಿದೆ. ಸರ್ಕಾರಗಳು ಮಾಡಬೇಕಾದ ಕೆಲಸವನ್ನು ಮಠಗಳು ಮಾಡುತ್ತಿವೆ. ವಿದ್ಯಾ ಕ್ಷೇತ್ರ, ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತಂದಿವೆ ಎಂದರು.

ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಮಹಾಕುಂಭಮೇಳದಲ್ಲಿ ಮೇಲು-ಕೀಳು ಇರಲಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣಲಾಯಿತು. ಇದೇ ಸನಾತನ ಧರ್ಮ. ಮಠದಲ್ಲಿ ನಡೆಯುತ್ತಿರುವ ಈ ಮಹೋತ್ಸವ ಸಹ ಕುಂಭಮೇಳವಿದ್ದಂತೆ. ಇಲ್ಲಿಯೂ ಜಾತಿ, ಅಂಥ ಸ್ಥಿತಿಯಲ್ಲಿ ಮೇಲು-ಕೀಳು ಇಲ್ಲದೆ ಎಲ್ಲರನ್ನೂ ಒಂದೇ ಎಂದು ಕಾಣಲಾಗುತ್ತಿದೆ ಎಂದು ಹೇಳಿದರು.

ಈಗಿನ ಯುವಕರಲ್ಲಿ ಧರ್ಮ ರಕ್ಷಣೆಯ ಶ್ರದ್ಧೆ ಮರೆಯಾಗುತ್ತಿದೆ. ಹಿಂದು ಯುವಕರು ಧರ್ಮ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು. ಆಗ ಧರ್ಮದ ಒಳಗಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯ ಎಂದರು.

ಬೆಂಗಳೂರಿನ ರಾಮಕೃಷ್ಣ ವಿವೇಕಾನಂದ ವೇದಾಂತ ಆಶ್ರಮದ ಅಭಯಾನಂದ್ ಮಹಾರಾಜ್, ಅರಕಲಗೂಡು ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಸಿದ್ಧಾರೂಢ ಮಿಷನ್ ಆಶ್ರಮದ ಆರೂಢ ಭಾರತಿ ಸ್ವಾಮೀಜಿ, ನಿಟ್ಟೂರು ನಾರಾಯಣಗುರು ಮಹಾ ಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಇಮ್ಮಡಿ ಮೇದಾರ ಗುರು ಪೀಠದ ಕೇತೇಶ್ವರ ಸ್ವಾಮೀಜಿ, ಬಾಗಲಕೋಟೆ ಶಂಕರಾಚಾರ್ಯ ಆಶ್ರಮದ ಕೃಷ್ಣ್ಣಾನಂದ ಶರಣರು, ಬುದ್ಧ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಆಂಧ್ರಪ್ರದೇಶದ ಮಾಜಿ ಸಚಿವ ಮಾಣಿಕ್ಯವರಪ್ರಸಾದ್ ಮಾತನಾಡಿದರು.

ನಾವು ಜಾಂಬವಂತ ಕುಲಸ್ಥರು. ಈ ಸಮುದಾಯದಲ್ಲಿ ಪ್ರೀತಿ, ಭಕ್ತಿ ಎಲ್ಲವೂ ಇದೆ. ಆದರೆ ಅನಾಗರಿಕತೆ ಇದೆ. 12ನೇ ಶತಮಾನದಲ್ಲಿ ಪರಿವರ್ತನೆ ಆರಂಭವಾಯಿತು. ಈಗ ಮಠದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಿಂದ ಆಂಧ್ರಪ್ರದೇಶ, ತೆಲಂಗಾಣದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಹರಿಹರಪುರ ಶ್ರೀಗಳು ಮಾದಿಗ ಸಮಾಜ ಮುಂಚೂಣಿಗೆ ಬರಲು ದಾರಿ ತೋರಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಂ.ಮುನಿಯಪ್ಪ ಹೇಳಿದರು. ದೇಶದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಮೂಢಬೇಕು. ನಮ್ಮಲ್ಲಿನ ಒಡಕು ಧರ್ಮ ನಶಿಸಿಲು ಕಾರಣವಾಗುತ್ತದೆ. ಋಷಿ ಮುನಿಗಳಲ್ಲಿ ದೇವರನ್ನು ಕಂಡ ಏಕೈಕಲ ದೇಶ ಭಾರತ. ಈ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕಿದೆ. ತಾರತಮ್ಯ ಎಲ್ಲಿಯೂ ಇಲ್ಲ, ನಮ್ಮಲ್ಲಿ ಇದೆ. ಸರಿಪಡಿಸಿಕೊಂಡು ಹೋಗಬೇಕಿದೆ ಎಂದರು.

ನಮ್ಮ ಸಂಸ್ಕೃತಿ ಜಾತಿಯನ್ನು ಬೆಂಬಲಿಸಿಲ್ಲ. ಜಾತಿಗೊಂದು ಸ್ವರ್ಗ ಇಲ್ಲ. ಮಹಾಜ್ಞಾನಿಗಳು ಜಾತಿ ದೂರ ಇಟ್ಟರೆ, ಅಲ್ಪ ಜ್ಞಾನಿ ನಾವೆಲ್ಲ ಜಾತಿ ಅಂಟಿಸಿಕೊಂಡಿದ್ದೇವೆ. ಬುದ್ಧ, ಮಹಾವೀರರಿಂದ ಕುವೆಂಪುವರೆಗೆ ಜಾತಿ ದೂರ ಮಾಡಲು ಶ್ರಮಿಸಿದರು. ಸಂವಿಧಾನದಲ್ಲಿ ಸಮಾನತೆ ಸಾರಿದ್ದರು. ಆದರೆ ಇಂದಿನ ರಾಜಕಾರಣ ಜಾತೀಯತೆಯನ್ನು ಕುಸಿದು ಬೀಳಲು ಬಿಡುವುದಿಲ್ಲ. ಸನಾತನ ಧರ್ಮದ ಅನುಸಾರ ಸಾಗೋಣ. ಅಂಧಕಾರ, ಅಸ್ಪ್ರಶ್ಯತೆ ಹೋಗಲಾಡಿಸಲು ಸನಾತನ ಧರ್ಮದ ಜ್ಯೋತಿ ಎಲ್ಲೆಡೆ ಹಚ್ಚಬೇಕು ಎಂದು ಎಂಎಲ್ಸಿ ಸಿ.ಟಿ.ರವಿ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ ಧರ್ಮ ಜಾಗರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆ. ಹರಿಹರಪುರ ಶ್ರೀಗಳು ನಮ್ಮ ಪ್ರಾಂತಕ್ಕೆ ಬಂದಾಗ ಅಧ್ಯಾತ್ಮದ ಒಲವು ಹೆಚ್ಚಾಯಿತು. ಈಗ ಪೀಠದ ಮೂಲಕ ಇನ್ನಷ್ಟು ಸನಾತನ ಸಂಸ್ಕೃತಿಯ ಕಾರ್ಯ ಮಾಡಲಾಗುತ್ತದೆ ಎಂದು ಮಾತಂಗ ಮಹಾಪೀಠದ ನೂತನ ಪೀಠಾಧಿಪತಿ ಮಾತಂಗಾನಂದ ಗಿರಿ ಸ್ವಾಮೀಜಿ ಹೇಳಿದರು. ಹರಿಹರಪುರ ಮಠದಲ್ಲಿ ಮಾತಂಗ ಮಹಾಪೀಠದ ನೂತನ ಪೀಠಾಧಿಪತಿಯಾಗಿ ಗುರುದೀಕ್ಷೆ ಸ್ವೀಕರಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗ ಸಮುದಾಯವನ್ನು ಮುನ್ನಲೆಗೆ ತರುವಲ್ಲಿ ಹರಿಹರಪುರ ಶ್ರೀಗಳ ಕೊಡುಗೆ ಅಪಾರ. ನಮ್ಮ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ನಮ್ಮ ಗುರುಪೀಠದಿಂದ ಮಾಡಲಾಗುತ್ತದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net