ಹಿಂದು ಸಂಸ್ಕೃತಿ ರಕ್ಷಣೆಗೆ ಶ್ರಮಿಸಲಿ

22CHIKODIGRAMEEN1
Published on

ಚಿಕ್ಕೋಡಿ ಗ್ರಾಮೀಣ: ಹಿಂದು ಸಾಮ್ರಾಜ್ಯದ ಉಳಿವು ಮತ್ತು ಭವ್ಯ ಭಾರತ ನಿರ್ಮಾಣಕ್ಕಾಗಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು ಎಂದು ಉಡುಪಿಯ ಪೇಜಾವರ ಅಧೋಕ್ಷಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ತಾಲೂಕಿನ ಯಕ್ಸಂಬಾದಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗದಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಾಸತ್ಸಂಗ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿ ಅಳವಡಿಸಿಕೊಂಡು ವಿದೇಶಿಗಳಾಗುತ್ತಿರುವುದು ವಿಷಾದನೀಯ. ಆದ್ದರಿಂದ ಮಕ್ಕಳಿಗೆ ಹಿಂದು ಸಂಸ್ಕೃತಿ ಕುರಿತು ತಿಳಿವಳಿಕೆ ನೀಡಬೇಕು. ದೇಶ, ಧರ್ಮ, ಸಂಸ್ಕೃತಿಯ ರಕ್ಷಣೆ ನಮ್ಮಿಂದಲೇ ಪ್ರಾರಂಭವಾಗಲಿ ಎಂದರು.

ಗದಗಿನ ಸದಾಶಿವಾನಂದ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ಪ್ರಯಾಗರಾಜನ ತ್ರಿವೇಣಿ ಸಂಗಮದ ಮಹಾಕುಂಭಮೇಳ, ಗೋಪೂಜೆ, ಗಂಗಾಪೂಜೆ ಇವು ಭಾರತೀಯ ಸಂಸ್ಕೃತಿಯ ದ್ಯೋತಕಗಳು. ದೇಶ, ಧರ್ಮ ಉಳಿವಿಗಾಗಿ ಮಹಾಸತ್ಸಂಗ ಕಾರ್ಯಕ್ರಮಗಳಿಗೆ ಕೈಜೋಡಿಸಬೇಕೆಂದರು.

ನಿಡಸೋಸಿಯ ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ಕವಲಗುಡ್ಡದ ಅಮರೇಶ್ವರ ಸ್ವಾಮೀಜಿ, ವಿಶ್ವ ಹಿಂದು ಪರಿಷತ್ ಕ್ಷೇತ್ರಿಯ ಧರ್ಮಾಚಾರ್ಯ ಬಸವರಾಜ ಮಾತನಾಡಿದರು.

ಸಾವಿರಾರು ಮಹಿಳೆಯರ ಪೂರ್ಣ ಕುಂಭಮೇಳ, ಪ್ರಯಾಗರಾಜದ ತ್ರೀವೇಣಿ ಸಂಗಮದ ಪವಿತ್ರ ಜಲ ಹಾಗೂ ವಿವಿಧ ವಾದ್ಯಮೇಳದೊಂದಿಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಶೋಭಾ ಯಾತ್ರೆ, ಹನುಮಾನ ಪಲ್ಲಕ್ಕಿ ಉತ್ಸವ, ಸಾಮೂಹಿಕ ಹನುಮಾನ ಚಾಲಿಸಾ ಪಠಣ, ಮಹಾಪ್ರಸಾದ ಜರುಗಿತು.

ಸಂಕೇಶ್ವರದ ಚಿದಾನಂದ ವಿದ್ಯಾನರಸಿಂಹಭಾರತಿ ಸ್ವಾಮೀಜಿ ಸೇರಿ 60ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಶಶಿಕಲಾ ಜೊಲ್ಲೆ, ರಮೇಶ ಜಾರಕಿಹೊಳಿ, ಗಣೇಶ ಹುಕ್ಕೇರಿ, ಮಾಜಿ ಶಾಸಕ ಸಂಜಯ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net