

ಕಲಬುರಗಿ: ಹಿಂದುಗಳ ಮತಾಂತರಕ್ಕೆ ಮುಸ್ಲಿಂ ಸಂಘಟನೆಗಳು ನಿರಂತರ ಪ್ರಯತ್ನ ಪಡುತ್ತಿದ್ದು, ದೇಶದಲ್ಲಿ ೨೦ ವರ್ಷದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳವಾಗಿದೆ. ಇದಕ್ಕೆ ಪ್ರಮುಖ ಕಾರಣ ಹಿಂದು ಯುವತಿಯರನ್ನು ಮೋಸದ ಜಾಲಕ್ಕೆ ಬೀಸಿ, ಲವ್ ಜಿಹಾದ್ ಆಗಿದ್ದು, ಅದನ್ನು ತಡೆದು ಯುವತಿಯರನ್ನು ರಕ್ಷಿಸಲು ಸಹಾಯವಾಣಿ ಆರಂಭಿಸಲಾಗಿದೆ ಎಂದು ಶ್ರೀರಾಮಸೇನೆ ಗೌರವಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಹಿಂದು ಯುವತಿಯರನ್ನು ಮೋಸದ ಪ್ರೀತಿಯ ಜಾಲಕ್ಕೆ ಕೆಡವಿ, ಮದುವೆ ಮಾಡಿ ಮತಾಂತರ ಮಾಡಲಾಗುತ್ತಿದೆ. ಕಾಲೇಜು, ಟ್ಯೂಷನ್ ಕ್ಲಾಸ್, ಮಾಲ್, ಬ್ಯೂಟಿ ಪಾರ್ಲರ್‌ಗಳು, ರೀಚಾರ್ಜ್ ಕೇಂದ್ರಗಳಲ್ಲಿ ಮುಸ್ಲಿಂ ಯುವಕರೊಂದಿಗೆ ಯುವತಿಯರನ್ನು ನೇಮಿಸಿ, ಹಿಂದು ಯುವತಿಯರನ್ನು ಖೆಡ್ಡಾಕ್ಕೆ ಕೆಡವಲು `ಶಾಹೀನ್ ಗ್ಯಾಂಗ್' ಕೆಲಸ ಮಾಡುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗ್ಯಾಂಗ್ ಮೂಲಕ ಹಿಂದು ಯುವತಿಯರನ್ನು ಮುಸ್ಲಿಂ ಯುವಕರಿಗೆ ಪರಿಚಯಿಸುವುದು, ಯುವಕರ ಬಗ್ಗೆ ವೈಭವೀಕರಿಸಿ ಸೆಳೆಯುವುದು. ಹದಿಹರೆಯದ ಯುವತಿಯರನ್ನು ಸ್ನೇಹ, ಪ್ರೀತಿ, ಪ್ರೇಮ, ಕಾಮದತ್ತ ಸೆಳೆದು, ಅದರ ವಿಡಿಯೋ ಮಾಡಿ, ಪ್ರೀತಿ, ಮದುವೆಗೆ ನಿರಾಕರಿಸಿದರೆ ಬ್ಲಾಕ್‌ಮೇಲ್ ಮಾಡಲಾಗುತ್ತಿದೆ. ಮರ್ಯಾದೆ ಅಂಜುವವರನ್ನು ಮದುವೆ ಆಗಿ, ಮಕ್ಕಳ ಹೆರುವ ಯಂತ್ರ ಮಾಡಲಾಗುತ್ತಿದೆ. ಕಿರುಕುಳ ನೀಡಲಾಗುತ್ತದೆ ಎಂದು ತಿಳಿಸಿದರು.
ಸಂತ್ರಸ್ಥೆಯರನ್ನು ನಡು ನೀರಿನಲ್ಲಿ ಕೈ ಬಿಡುವ ಪ್ರಯತ್ನಗಳು ಆಗುತ್ತಿವೆ. ನೇಹಾ ಹಿರೇಮಠ ಪ್ರಕರಣದಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಹತ್ಯೆ ಮಾಡಲಾಯಿತು. ಇಂತಹ ಘಟನೆಗಳು ತಡೆಯಲು, ಶ್ರೀರಾಮ ಸೇನೆ ಸಹಾಯವಾಣಿ (೯೦೯೦೪೪೩೪೪೪) ಆರಂಭಿಸಿದೆ. ಧಾರವಾಡದ ಕೇಂದ್ರ ಕಾರ್ಯಾಲಯದ ಮೂಲಕ ಸಹಾಯವಾಣಿ ಕಾರ್ಯಾಚರಣೆ ನಡೆಸಲಿದೆ ಎಂದು ಹೇಳಿದರು. ಪ್ರಮುಖರಾದ ವಿಜಯ ಪಾಟೀಲ್, ಮಹೇಶ ಗೊಬ್ಬುರ, ಶಶಾಂಕ ನಾಯಕ್, ಮಂಜುನಾಥ ಭಾವಿ, ಮಹೇಶ ಯಾದವ, ಮಲಕಣ್ಣ ಇತರರಿದ್ದರು.