

ಚಿತ್ರದುರ್ಗ: ಹಿಂದು ಮಹಾಗಣಪತಿ ಮಹೋತ್ಸವ 2024ರ ಅಂಗವಾಗಿ ಅಕ್ಕ-ತಂಗಿಯರಾದ ನವದುರ್ಗೆಯರನ್ನು ಒಳಗೊಂಡು 13ಕ್ಕೂ ಅಧಿಕ ಶಕ್ತಿದೇವತೆಗಳ ವೈಭವೋಪೇತ ಮೆರವಣಿಗೆ ರಾಜಬೀದಿಗಳಲ್ಲಿ ಸೋಮವಾರ ಸಂಚರಿಸಿತು.
ಐತಿಹಾಸಿಕ ಸಿಹಿನೀರು ಹೊಂಡದಲ್ಲಿ ಗಂಗಾಪೂಜೆಗೆ ಒಂದೊಂದಾಗಿ ಆಗಮಿಸಿದ ಶಕ್ತಿದೇವತೆಗಳ ಉತ್ಸವ ಮೂರ್ತಿಗೆ ಅರ್ಚಕರು ಮಹಾಮಂಗಳಾರತಿ ನೆರವೇರಿಸುವ ಮೂಲಕ ಬರಮಾಡಿಕೊಂಡರು. ಪೂಜೆ ಬಳಿಕ ದುರ್ಗದ ಅಧಿದೇವತೆ ಏಕನಾಥೇಶ್ವರಿ, ರಾಜಮಾತೆ ಉಚ್ಚಂಗಿಯಲ್ಲಮ್ಮ ದೇವಿಯರ ಉತ್ಸವ ಮೂರ್ತಿ ನೇತೃತ್ವದಲ್ಲಿ ಭವ್ಯ ಮೆರವಣಿಗೆಗೆ ಚಾಲನೆ ದೊರೆಯಿತು.
ನಗರ ದೇವತೆಗಳಾದ ಬರಗೇರಮ್ಮ, ಕಾಳಿಕಾಮಠೇಶ್ವರಿ, ಬನಶಂಕರಿ, ಗೋಪಾಲಪುರ ರಸ್ತೆಯ ದುರ್ಗಾ ದೇವಿ, ಮಲೆನಾಡು ಚೌಡೇಶ್ವರಿ, ಸಿಗಂದೂರು ಚೌಡೇಶ್ವರಿ, ಗೊಕಟ್ಟೆ ಕಣಿವೆಮಾರಮ್ಮ, ಬುಡ್ಡಾಂಬಿಕಾ, ಕನ್ಯಾಕಾ ಪರಮೇಶ್ವರಿ, ಆದಿಶಕ್ತಿ ಮಾರಿಕಾಂಬ ದೇವಿ, ರೈಲ್ವೆ ಸ್ಟೇಷನ್ ಸಮೀಪದ ಶಕ್ತಿದೇವತೆ, ಕೋಳಿಬುರುಜನಹಟ್ಟಿ ದುರ್ಗಮ್ಮ ದೇವಿ ಸೇರಿ ದೇವಿಯರ ಉತ್ಸವ ಮೂರ್ತಿಗಳು ಪಾಲ್ಗೊಂಡಿದ್ದವು.
ಶಕ್ತಿದೇವತೆಗಳ ಮೂರ್ತಿಗಳನ್ನು ವಿವಿಧ ವರ್ಣದ ಪುಷ್ಪ, ಮಣಿ ಸೇರಿ ಆಕರ್ಷಕ ವಸ್ತುಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ವಿಶೇಷವಾಗಿ ಅಲಂಕರಿಸಲಾಗಿತ್ತು. ಕಹಳೆ, ಉರುಮೆ, ಡೊಳ್ಳು, ನಾದಸ್ವರ, ತಮಟೆ ಸೇರಿ ಇತರೆ ಜನಪದ ಕಲಾತಂಡಗಳ ಮಂಗಳವಾದ್ಯಗಳು ಮೆರುಗು ನೀಡಿದವು.
ಹೊಳಲ್ಕೆರೆ ರಸ್ತೆ, ಸಂಗೊಳ್ಳಿರಾಯಣ್ಣ, ಗಾಂಧಿ, ಎಸ್‌ಬಿಐ, ಮದಕರಿನಾಯಕ ವೃತ್ತ, ಬಿ.ಡಿ.ರಸ್ತೆ ಮಾರ್ಗವಾಗಿ ಸಂಚರಿಸಿ ಮಹಾಗಣಪನನ್ನು ಪ್ರತಿಷ್ಠಾಪಿಸಿರುವ ಜೈನ್ ಧಾಮ ಪ್ರವೇಶಿಸಿದ ದೇವತೆಗಳ ಮೂರ್ತಿಗೆ ಅದ್ದೂರಿ ಸ್ವಾಗತ ದೊರೆಯಿತು. ಈ ಕ್ಷಣವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ಮಾರ್ಗದುದ್ದಕ್ಕೂ ಒಂದರ ಹಿಂದೆ ಮತ್ತೊಂದರಂತೆ ಸಾಗುತ್ತಿದ್ದ ದೇವತೆಗಳ ಮುಂಭಾಗದಲ್ಲಿ ವಿಶ್ವ ಹಿಂದು ಪರಿಷದ್, ಬಜರಂಗದಳ, ಹಿಂದು ಮಹಾಗಣಪತಿ ಉತ್ಸವ ಸಮಿತಿ ಕಾರ್ಯಕರ್ತರು ಸೇರಿ ಅನೇಕ ಭಕ್ತರು ಪಾಲ್ಗೊಂಡಿದ್ದರು. ಉಧೋ ಉಧೋ ಎಂಬ ಹರ್ಷೋದ್ಗಾರ ಮೊಳಗಿಸಿದರು. ಈ ಸುಂದರ ದೃಶ್ಯವನ್ನು ರಸ್ತೆ ಬದಿಯಲ್ಲಿ ನಿಂತಿದ್ದ ಭಕ್ತರು ಕಣ್ತುಂಬಿಕೊಂಡರಲ್ಲದೆ, ಮೊಬೈಲ್‌ಗಳ ಮೂಲಕ ಸೆರೆಹಿಡಿಯಲು ಮುಂದಾದರು.
ಸ್ವಾಮಿ ಸನ್ನಿಧಿಯಲ್ಲಿ ಮಂಗಳವಾರ ಗಣ, ನವ, ಮೃತ್ಯುಂಜಯ ಹೋಮ ಅನೇಕ ಭಕ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತು. ಪೂರ್ಣಾಹುತಿ ಬಳಿಕ ಜೈ ಶ್ರೀರಾಮ್ ಬಳಗದಿಂದ ಆಯೋಜಿಸಿದ್ದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು ಎಂದು ಸಮಿತಿ ತಿಳಿಸಿದೆ.
ಹತ್ತನೇ ಬಾರಿ ಸಮಾಗಮ: ಐತಿಹಾಸಿಕ ಕೋಟೆನಗರಿಯಲ್ಲಿ ಈ ರೀತಿ ಶಕ್ತಿದೇವತೆಗಳು ಒಂದೆಡೆ ಸೇರುತ್ತಿರುವುದು ಇದು ಹತ್ತನೇ ಬಾರಿ. 2014ರಲ್ಲಿ ಶಕ್ತಿದೇವತೆಗಳ ಸಂಗಮ ಹೆಸರಿನಲ್ಲಿ ಆಯೋಜಿಸಿದ್ದ ಬೃಹತ್ ಶೋಭಾಯಾತ್ರೆಯಲ್ಲಿ ಜಿಲ್ಲೆಯ ಸುತ್ತಮುತ್ತ ಗ್ರಾಮಗಳ 58ಕ್ಕೂ ಹೆಚ್ಚು ಶಕ್ತಿದೇವತೆಗಳು ಪಾಲ್ಗೊಂಡಿದ್ದವು. ಪ್ರತಿ ವರ್ಷ ಮಹಾಗಣಪನ ಸನ್ನಿಧಿಯಲ್ಲಿ ನಡೆಯಲಿರುವ ಹೋಮ ಪೂಜಾ ಕಾರ್ಯಗಳಲ್ಲೂ ಸತತ ಐದಾರು ವರ್ಷಗಳಿಂದ ಶಕ್ತಿದೇವತೆಗಳನ್ನು ಕರೆತರಲಾಗುತ್ತಿದೆ.