

ಚಿತ್ರದುರ್ಗ: ರಾಜ್ಯದಲ್ಲೇ ಪ್ರಸಿದ್ಧಿ ಪಡೆದು ಮನೆ ಮಾತಾಗಿರುವ ಹಿಂದು ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಅ. 8ರ ಇಂದು ಅತ್ಯಂತ ವೈಭವೋಪೇತವಾಗಿ ಜರುಗಲಿದ್ದು, ಅದರ ಅಂಗವಾಗಿ ಕೋಟೆನಗರಿ ಈಗಾಗಲೇ ಸಂಪೂರ್ಣ ಸಜ್ಜಾಗಿದ್ದು, ಸ್ವಾಮಿಯನ್ನು ಮಾರ್ಗದುದ್ದಕ್ಕೂ ಸ್ವಾಗತಿಸಲು ಭಕ್ತರು ಕಾತರರಾಗಿದ್ದಾರೆ…
ವಿಶ್ವ ಹಿಂದು ಪರಿಷದ್ ಮತ್ತು ಬಜರಂಗದಳ ಸಂಘಟನೆಯಿಂದ ನಗರದ ಜೈನಧಾಮದಲ್ಲಿ ಪ್ರತಿಷ್ಠಾಪಿಸಿರುವ ಮಹಾಗಣಪನ ಮಹೋತ್ಸವ ವರ್ಷದಿಂದ ವರ್ಷಕ್ಕೆ ಮೆರಗು ಪಡೆಯುತ್ತಿದ್ದು, ಈ ಮೂಲಕ ಕೋಟೆನಾಡಿನ ಧಾರ್ಮಿಕ ಖ್ಯಾತಿಯೂ ಹೆಚ್ಚುತ್ತಿದೆ. ರಾಜ್ಯವಷ್ಟೇ ಅಲ್ಲದೆ, ಹೊರ ರಾಜ್ಯಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಶೋಭಾಯಾತ್ರೆ ಸಂಬಂಧ ಪೆಂಡಾಲ್‌ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಎಸ್.ಆರ್.ಪ್ರಭಂಜನ್ ಮಾತನಾಡಿ, ಐತಿಹಾಸಿಕ ಕ್ಷಣಕ್ಕೆ ಚಿತ್ರದುರ್ಗ ಸಾಕ್ಷಿಯಾಗಲಿದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಲಿದೆ ಎಂದರು.
ಭಾನುವಾರ ಬೆಳಗ್ಗೆ 10ಕ್ಕೆ ಮಹಾರಾಷ್ಟ್ರ ಕೊಲ್ಲಾಪುರದ ಕನ್ನೇರಿಮಠ್ ಕಾಡಸಿದ್ದೇಶ್ವರ ಸ್ವಾಮೀಜಿ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದು, 12ಕ್ಕೂ ಅಧಿಕ ಮಠಾಧೀಶರು, ಸಂಘಟನೆಯ ಪ್ರಮುಖರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ನಮ್ಮ ಈ ಗಣೇಶೋತ್ಸವ ಹಿಂದು ಧರ್ಮದ ಜಾಗೃತಿ ಮತ್ತು ಸಂಸ್ಕೃತಿಗೆ ಒತ್ತು ನೀಡಿದ್ದು, ಅದಕ್ಕೆ ಅನುಗುಣವಾಗಿ ಕೇರಳ, ಮಹಾರಾಷ್ಟ್ರ, ರಾಜ್ಯದ 10ಕ್ಕೂ ಹೆಚ್ಚು ಕಲಾತಂಡಗಳು ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಲಿವೆ ಎಂದು ವಿವರಿಸಿದರು.
ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್ ಮಾತನಾಡಿ, ಸ್ವಾಮಿಯ ಶೋಭಾಯಾತ್ರೆ ಸಮೀಪಿಸುತ್ತಿದ್ದಂತೆ ನಗರಾದ್ಯಂತ ಸಿಂಗಾರ, ಸ್ವಾಮಿಯನ್ನು ಕಣ್ತುಂಬಿಕೊಳ್ಳಲು ಗ್ರಾಮೀಣ ಭಾಗದವರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಉತ್ಸವದತ್ತ ಬಾರದವರು, ಬಂದು ದರ್ಶನ ಪಡೆಯುತ್ತಿರುವುದು ಸಂತಸದ ವಿಚಾರ ಎಂದು ತಿಳಿಸಿದರು.
ಶಕ್ತಿ-ಭಕ್ತಿಯ ಸಂಗಮ: ಮಹಾಗಣಪನ ಮಹೋತ್ಸವ ಶಕ್ತಿ-ಭಕ್ತಿಯ ಸಂಗಮವಾಗಿದೆ. ಸಂಘಟಕರು ಇಲ್ಲಿ ಕೇವಲ ನೆಪಮಾತ್ರ. ಆರಂಭದಲ್ಲಿ ಕೆಲವರು ಅಪಹಾಸ್ಯ, ಆನಂತರ ವಿರೋಧ, ಕೊನೆಗೆ ಸ್ವಾಗತಿಸಿದರು. ಉತ್ಸವದಲ್ಲಿ ಪಕ್ಷ ಮುಖ್ಯವಲ್ಲ, ಹಿಂದು ಧರ್ಮೀಯರನ್ನು ಒಗ್ಗೂಡಿಸುವುದೇ ಧ್ಯೇಯ. ಆ ನಿಟ್ಟಿನಲ್ಲಿ ಯಶಸ್ಸು ಕಂಡಿದ್ದು, ಸ್ವಾಮಿಯ ಇಚ್ಛಾನುಸಾರವೇ ಪ್ರತಿ ವರ್ಷವೂ ವಿಜೃಂಭಣೆಯಿಂದ ನಡೆಯುತ್ತಿದೆ. ಗಣೇಶನ ಶಕ್ತಿ ರಾಜ್ಯ, ದೇಶವ್ಯಾಪಿ ಹರಡಿದೆ ಎಂದು ಸಮಿತಿ ತಿಳಿಸಿದೆ.
ಮೂರು ತಿಂಗಳ ಶ್ರಮ: ಪ್ರತಿ ವರ್ಷ ವಿಎಚ್‌ಪಿ ಮತ್ತು ಬಜರಂಗದಳದ ಸಾವಿರಾರು ಕಾರ್ಯಕರ್ತರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉತ್ಸವಕ್ಕಾಗಿ ಶ್ರಮಿಸುತ್ತಿದ್ದು, ಈ ಬಾರಿಯೂ ಹಗಲಿರುಗಳು ಯಶಸ್ಸಿಗಾಗಿ ಟೊಂಕಕಟ್ಟಿ ಕೆಲಸ ಮಾಡಿದ್ದಾರೆ. ದೂರದ ಊರುಗಳಿಂದ ಬರುವಂತ ಭಕ್ತರಿಗೆ ಯಾವುದೇ ತೊಂದರೆ ಆಗಬಾರದೆಂಬ ಉದ್ದೇಶಕ್ಕಾಗಿ ಅಲ್ಲಲ್ಲಿ ಪ್ರಸಾದ, ನೀರು, ಮಜ್ಜಿಗೆ ವ್ಯವಸ್ಥೆಗೂ ಸಿದ್ಧತೆ ಬರದಿಂದ ಸಾಗಿದೆ.
ಸಮಿತಿಯ ಮಾರ್ಗದರ್ಶಕ ಟಿ.ಬದ್ರಿನಾಥ್, ಸಂಘಟನೆಯ ಮುಖಂಡರಾದ ಷಡಾಕ್ಷರಪ್ಪ, ಸಂದೀಪ್, ಪಿ.ರುದ್ರೇಶ್, ರಂಗಸ್ವಾಮಿ, ಕಿರಣ್‌ಕುಮಾರ್ ಇತರರಿದ್ದರು.