ಹಿಂದು ಮಹಾಗಣಪತಿ ಸೆ.18ಕ್ಕೆ ಪ್ರತಿಷ್ಠಾಪನೆ

Uthsav
Published on

ಚಿತ್ರದುರ್ಗ: ರಾಜ್ಯ, ರಾಷ್ಟ್ರದ ಗಮನ ಸೆಳೆದಿರುವ ಕೋಟೆನಗರಿಯ ಹಿಂದು ಮಹಾಗಣಪತಿ ಮಹೋತ್ಸವವನ್ನು ಈ ಬಾರಿಯೂ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಹಿಂದು ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್ ತಿಳಿಸಿದರು.


ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವ ಹಿಂದು ಪರಿಷತ್, ಬಜರಂಗದಳ, ಉತ್ಸವ ಸಮಿತಿಯಿಂದ ಮಹೋತ್ಸವ ಆಚರಿಸುತ್ತ ಬರಲಾಗುತ್ತಿದ್ದು, ಸೆ. 3ರಂದು ಧ್ವಜ ಪೂಜೆ ನಡೆಯಲಿದೆ. 18ಕ್ಕೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ, ಅ. 8ಕ್ಕೆ ಬೃಹತ್ ಶೋಭಾಯಾತ್ರೆ ನಂತರ ವಿಸರ್ಜನೆಯಾಗಲಿದೆ ಎಂದು ಮಾಹಿತಿ ನೀಡಿದರು.


ಸಂಘಟನೆ ಹಾಗೂ ಲೋಪ ಉಂಟಾಗದಂತೆ ಎಚ್ಚರವಹಿಸಲು ಉಪ ಸಮಿತಿ ರಚಿಸಿ ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿ ನೀಡಲಾಗುವುದು ಎಂದರು.


ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಪ್ರಭಂಜನ್ ಮಾತನಾಡಿ, ಹಿಂದಿನ ವರ್ಷದಂತೆ ಸಾವರ್ಕರ್ ಹಾಗೂ ಅಶೋಕ್ ಸಿಂಘಾಲ್ ಮಂಟಪ ನಿರ್ಮಿಸಲಾಗುವುದು. ವೇದಿಕೆಗೆ ಜ.ರಾ.ರಾಮಮೂರ್ತಿ ಹೆಸರಿಡಲಾಗುವುದು. ಅಲ್ಲಿ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ ಎಂದು ಹೇಳಿದರು.


ಪ್ರತಿ ವರ್ಷ ಉತ್ಸವ ಸಮಿತಿ ರಚನೆಯಾಗಲಿದ್ದು, ಹಿಂದಿನ ಹಾಗೂ ನೂತನ ಸಮಿತಿ ಸೇರಿ 35 ರಿಂದ 40 ಜನ ಕಾರ್ಯನಿರ್ವಹಿಸಲಿದ್ದಾರೆ. ವಿಸರ್ಜನೆ ಹಾಗೂ ಲೆಕ್ಕ ಪತ್ರಗಳ ಸಮರ್ಪಕ ಮಾಹಿತಿಯನ್ನು ಪದಾಧಿಕಾರಿಗಳು ಸಮಿತಿಗೆ ನೀಡಿದ ನಂತರ ಸಮಿತಿ ಕೂಡ ವಿಸರ್ಜನೆಯಾಗಲಿದೆ ಎಂದರು.


ಸಮಿತಿ ಪ್ರಧಾನ ಕಾರ್ಯದರ್ಶಿ ಶರಣ್‌ಕುಮಾರ್, ಸಂಘಟನೆ ಮುಖಂಡರಾದ ರುದ್ರೇಶ್, ಸಂದೀಪ್, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net